Share this news

ಬೆಂಗಳೂರು: ಕೇರಳದಲ್ಲಿ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಕರ್ನಾಟಕದ ಪೊಲೀಸರು ಆರೋಪಿಗಳಿಂದಲೇ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ  ನಾಲ್ವರು ಪೋಲಿಸರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೋಲಿಸ್ ಆಯುಕ್ತ  ದಯಾನಂದ್ ಆದೇಶ ಹೊರಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸಿಪಿಯವರಿಂದ ವರದಿ ತರಿಸಿಕೊಂಡಿದ್ದ ಆಯುಕ್ತರು ಪ್ರಕರಣದ ತನಿಖೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ವೈಟ್ ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ಶಿವಾನಿ, ವಿಜಯ್ ಕುಮಾರ್, ಸಂದೇಶ್ ಅಮಾನತುಗೊಂಡಿರುವ ಸಿಬ್ಬಂದಿಗಳಾಗಿದ್ದಾರೆ.

ಪ್ರಕರಣದ ಹಿನ್ನಲೆ:
ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್​ವೇರ್ ಇಂಜಿನಿಯರ್​ ಬಳಿ ಆನ್​ಲೈನ್ ಮೂಲಕ 26 ಲಕ್ಷ ರೂ. ಹಣವನ್ನ ಪಡೆದು ವಂಚನೆ ಮಾಡಿದ ಆರೋಪದ ಹಿನ್ನಲೆ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್​ ಠಾಣೆಗೆ ದೂರು ಕೊಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಇಎನ್ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಮಡಿಕೇರಿಯ ಆರೋಪಿ ಐಸಾಕ್ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್​ನಲ್ಲಿ 2 ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗೂ ಅವರ ತಂಡ ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಹೋಗಿದ್ದರು. ಆಲ್ಲಿ ಆರೋಪಿಗಳಾದ ನೌಶಾದ್ ಹಾಗೂ ಅಕೀಲ್​ ಎಂಬುವವರಿಂದ ಆನ್ ಲೈನ್ ಫ್ರಾಡ್​ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನಲೆ ಅರೆಸ್ಟ್ ಮಾಡಲು ಪೊಲೀಸರು ತೆರಳಿದ್ದರು.

ಈ ವೇಳೆ ಆರೋಪಿ ಅಕೀಲ್​ ಪೊಲೀಸರು ನಮ್ಮ ಬಳಿ ಹಣ ಪಡೆದ ಆರೋಪದ ಮೇಲೆ ಕೇರಳದ ಕಲ್ಲಂಚೇರಿ ಠಾಣೆಯಲ್ಲಿ ದೂರು ನೀಡಿದ್ದ. ಹೌದು, ಎಫ್​ಐಆರ್​ನಲ್ಲಿ ಇನ್ನೋವಾ ಕಾರಿನಲ್ಲಿದ್ದ 3.95 ಲಕ್ಷ ಹಣವನ್ನ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಬಳಿಕ ಜಪ್ತಿ ಮಾಡಬೇಕಿತ್ತು. ಆದರೆ, ಪೊಲೀಸರು ಹಣ ನೀಡದಿದ್ರೆ, ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಆರೋಪಿ ಮಾಡುವುದಾಗಿ ನಿಖಿಲ್, ನೌಷಾದ್ ಹಾಗೂ ಅಖಿಲ್​ಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಆರೋಪ ಮಾಡಲಾಗಿತ್ತು. ಇದೀಗ ಎಸಿಪಿ ವರದಿ ಆಧರಿಸಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *