ಚಾಮರಾಜನಗರ(ಮಾ.01): ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ನಾಲ್ಕು ಕಡೆಗಳಿಂದ ಆರಂಭವಾಗಲಿರುವ 8000 ಕಿ.ಮೀ. ಉದ್ದದ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ಯ ಮೊದಲ ರಥಕ್ಕೆ ಪಕ್ಷದ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಅವರು ಬುಧವಾರ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಾಲನೆ ನೀಡಲಿದ್ದಾರೆ.
ಮೈಸೂರು ಭಾಗದಲ್ಲಿ ಸಂಚರಿಸಲಿರುವ ಈ ಯಾತ್ರೆಗೆ ಇಂದು ಮಧ್ಯಾಹ್ನ 12ಕ್ಕೆ ಚಾಲನೆ ಸಿಗಲಿದೆ. ಈ ವೇಳೆ ಸ್ಥಳೀಯ ಬೇಡಗಂಪಣ ಸಮುದಾಯದವರ ಜತೆಗೆ ನಡ್ಡಾ ಅವರು ಸಂವಾದವನ್ನೂ ನಡೆಸಲಿದ್ದಾರೆ. ಬಳಿಕ ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಪಕ್ಷದ ಹಲವು ಗಣ್ಯರು, ಸಚಿವರು ಉಪಸ್ಥಿತರಿರಲಿದ್ದಾರೆ.