ಕಾರ್ಗಿಲ್: ಭಾರತ ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯಶಾಲಿಯಾಗಿ ಇಂದಿಗೆ 24 ವರ್ಷಗಳು ಪೂರ್ಣಗೊಂಡಿವೆ. ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಭಾರತೀಯ ಸೇನೆ ಕಾರ್ಗಿಲ್ನ ದ್ರಾಸ್ನಲ್ಲಿರುವ ವೀರ ಸೇನಾನಿಗಳ ಸ್ಮಾರಕಕ್ಕೆ ಚೀತಾ ಹೆಲಿಕಾಪ್ಟರ್ಗಳ ಮೂಲಕ ಪುಷ್ಪಾರ್ಚನೆ ಮಾಡಿದೆ.
ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಇಂದು ದೇಶಾದ್ಯಂತ ವೀರಯೋಧರ ಸ್ಮರಣಾರ್ಥ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಲಡಾಕ್ನ ದ್ರಾಸ್ ಬಳಿ ಇರುವ ಕಾರ್ಗಿಲ್ ಯುದ್ಧಸ್ಮಾರಕದ ಬಳಿ ವಿಜಯ ದಿವಸದ ಅಂಗವಾಗಿ ಹಲವು ಕಾರ್ಯಕ್ರಮಗಳು ಆಯೋಜನೆಯಾಗಿವೆ. 1999ರಲ್ಲಿ ಪಾಕಿಸ್ತಾನದ ಜೊತೆ ನಡೆದ ಈ ಯುದ್ಧದಲ್ಲಿ 674 ವೀರಯೋಧರು ದೇಶಕ್ಕಾಗಿ ತಮ್ಮ ಪ್ರಾಣ ತೆತ್ತಿದ್ದರು.
ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮೂರು ತಿಂಗಳ ಸುದೀರ್ಘ ಕದನವಾಗಿತ್ತು. ಮೇ 1999 ರಲ್ಲಿ ಪ್ರಾರಂಭವಾದ ಈ ಯುದ್ಧ ಸುಮಾರು ಮೂರು ತಿಂಗಳ ಕಾಲ ನಡೆದು ಜುಲೈ 26 ರಂದು ಭಾರತ ಕಾರ್ಗಿಲ್ ಪ್ರದೇಶವನ್ನು ಮರಳಿ ವಶಕ್ಕೆ ಪಡೆಯಿತು. ಸುಮಾರು 1,500 ಪಾಕಿಸ್ತಾನಿ ಸೈನಿಕರು ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕವನ್ನು ಕಡಿದು ಹಾಕುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ನಲ್ಲಿ ಭಾರತೀಯ ಪ್ರದೇಶಕ್ಕೆ ಒಳನುಗ್ಗಿದ ನಂತರ ಈ ಯುದ್ಧ ಪ್ರಾರಂಭವಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ, 674 ಭಾರತೀಯ ಸೈನಿಕರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಅವರಲ್ಲಿ ನಾಲ್ವರು ಯೋಧರಿಗೆ ಪರಮ ವೀರ ಚಕ್ರಗಳು, 10 ಯೋಧರಿಗೆ ಮಹಾವೀರ ಚಕ್ರಗಳು ಮತ್ತು 70 ವೀರ ಚಕ್ರಗಳನ್ನು ಮರಣೋತ್ತರವಾಗಿ ನೀಡಿ ಪುರಸ್ಕರಿಸಲಾಗಿದೆ.