Share this news

ಕಾರ್ಕಳ: ಕನ್ನಡ ಸಂಸ್ಕೃತಿ ಇಲಾಖೆಯಡಿ ಬರುವ ಗೆಜೆಟಿಯರ್ ಇಲಾಖೆಯು ಇದೀಗ ಕಾರ್ಕಳ ತಾಲೂಕಿನ ಗೆಜೆಟಿಯರ್ ಅನ್ನು ಸಂಪಾದಿಸಿ ಕಾರ್ಕಳ ಗೆಜೆಟಿಯರ್ ಎಂಬ ಪುಸ್ತಕವನ್ನು ಹೊರತಂದಿದ್ದು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಸಮಾರಂಭದ ಅಂಗವಾಗಿ ಇಂದು ಸಂಜೆ ಬೈಲೂರು ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಿಡುಗಡೆ ಆಗಲಿದೆ.

ಒಂದು ರಾಜ್ಯದ  ಯಾವುದೇ ಜಿಲ್ಲೆಯ ಅಥವಾ  ತಾಲೂಕಿನ ಸಮಗ್ರ ವಿವರಗಳನ್ನು ಕ್ರೋಡಿಕರಿಸಿದ ಮಾಹಿತಿಯನ್ನು ಒದಗಿಸುವ  ಗ್ರಂಥವನ್ನು ಗೆಜೆಟಿಯರ್ ಎನ್ನುತ್ತಾರೆ. ಸದ್ರಿ ಗೆಜೆಟಿಯರ್‌ನಲ್ಲಿ ಆ ಪ್ರದೇಶದ ಅಥವಾ  ತಾಲೂಕಿನ ಸ್ಥಳ ಇತಿಹಾಸ,  ಅಲ್ಲಿ ಹರಿಯುವ ನದಿಗಳ ವಿವರ, ಭೂಪ್ರದೇಶದ ವಿವರ, ಅರಣ್ಯ ಸಂಪತ್ತು, ಖನಿಜಗಳ ವಿವರ, ಕೃಷಿ
ಚಟುವಟಿಕೆ, ಹವಾಗುಣ, ವ್ಯಾಪಾರ, ಉದ್ಯೋಗ ವಾಣಿಜ್ಯ, ಕೈಗಾರಿಕೆ, ಜನಸಂಖ್ಯೆ ವಿವರ, ಜನಸಾಂದ್ರತೆ, ಸಾರಿಗೆ ವ್ಯವಸ್ಥೆ, ಸ್ಥಳೀಯ ಆಡಳಿತ ವ್ಯವಸ್ಥೆ, ಜನಜೀವನ, ಪ್ರಾಣಿ ಸಾಗಾಣಿಕೆ, ಹಬ್ಬ ಹರಿದಿನ, ಜನರ ಸಂಸ್ಕೃತಿ, ಆಚಾರ ಪದ್ಧತಿ, ಉಡುಗೆ ತೊಡುಗೆಗಳು, ಆ ಪ್ರದೇಶದಲ್ಲಿರುವ ದೇವಾಲಯಗಳ ಕಲೆ, ವಾಸ್ತು ಶಿಲ್ಪ, ಸಾಹಿತ್ಯ, ಗೃಹಕೈಗಾರಿಕೆ,
ಮಾರುಕಟ್ಟೆ ಸೌಲಭ್ಯಗಳು,  ಆ ಪ್ರದೇಶದಲ್ಲಿರುವ ಆಸಕ್ತ ಸ್ಥಳಗಳು, ಪಾರಂಪರಿಕ ತಾಣಗಳು, ಪ್ರವಾಸೋದ್ಯಮ ತಾಣಗಳು, ಸಂರಕ್ಷಿತ ವನ್ಯಧಾಮಗಳು, ನದಿಗಳು, ಜಲಪಾತ, ಪರ್ವತ ಶ್ರೇಣಿಗಳು ಸೇರಿದಂತೆ ಆ ಕ್ಷೇತ್ರದ ಮುಂತಾದ ವಿಷಯಗಳ ಸಮಗ್ರವಾದ ಮಾಹಿತಿ ನೀಡುವ ಸಂಗ್ರಹವೇ ಗೆಜೆಟಿಯರ್.

ಈ ಮಾಹಿತಿಯಿಂದ ಮುಖ್ಯವಾಗಿ ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ, ಆಡಳಿತಗಾರರಿಗೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಪ್ರವಾಸಿಗರು ಪ್ರವಾಸಯೋಜನೆ ರೂಪಿಸಿಕೂಳ್ಳಲು, ಕೈಗಾರಿಕೆ, ಕೃಷಿ ವಾಯುಗುಣದ ಮಾಹಿತಿ ಸಿಗುವುದರಿಂದ ಯಾವ ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬಹುದು ಎಂದು ಅಂದಾಜಿಸಲು ಅನುಕೂಲವಾಗುವುದು. ಸಂರಕ್ಷಿತ ತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಾಯವಾಗುತ್ತದೆ. ಆಯಾ ಪ್ರದೇಶದ ಸಮಗ್ರ ಮಾಹಿತಿ ಸಿಗುವುದರಿಂದ ಸರ್ಕಾರವು ಆ ಪ್ರದೇಶದ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ.

 

Leave a Reply

Your email address will not be published. Required fields are marked *