Share this news

ಬೆಂಗಳೂರು: ಸಮಾಜದ ಶೋಷಿತರ ಧ್ವನಿಯಾಗಬೇಕೆನ್ನುವ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿಯಾಗಿದ್ದು ಈ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದ್ದು ಮುಂದೆ ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಅವರು ಭಾನುವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ಶೋಷಿತ ಸಮುದಾಯಗಳ ಮಹಾಸಂಸ್ಥಾನ ಆಗಬೇಕು ಎನ್ನುವ ಮಹಾ ಉದ್ದೇಶದಿಂದ ಕಾಗಿನೆಲೆ ಮಹಾಸಂಸ್ಥಾನವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಇದು ಕೇವಲ ಒಂದು ಜಾತಿ-ಸಮಾಜದ ಮಠ ಅಲ್ಲ. ಸರ್ವ ಶೋಷಿತ ಸಮಾಜಗಳಿಗೆ ಸೇರಿದ ಮಹಾ ಸಂಸ್ಥಾನವಾಗಿದೆ ಎಂದು ಸಿಎಂ ಹೇಳಿದರು.


ಶೋಷಿತ ಸಮುದಾಯಗಳಿಗೆ ಧ್ವನಿ ಆಗುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯವನ್ನು ಒಟ್ಟಾಗಿಸಿ ಕಾಗಿನೆಲೆ ಮಹಾಸಂಸ್ಥಾನ ಸ್ಥಾಪಿಸಲಾಗಿದೆ. ಮೊದಲ ಸ್ವಾಮೀಜಿ ತಾರಕಾನಂದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಯಶಸ್ವಿಯಾಗಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬರುತ್ತಿರುವ ಪೀಠ ಈಗ ನಿರಂಜನಾನAದಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಸಮಾಜಮುಖಿಯಾಗಿ ನಡೆಯುತ್ತಿದೆ ಎಂದರು.

ನಾವು ಚುನಾವಣೆ ವೇಳೆ ನೀಡಿರುವ ಐದೂ ಗ್ಯಾರಂಟಿಗಳನ್ನು ಎಷ್ಟೇ ಕಷ್ಟ ಬಂದರೂ ಜಾರಿ ಮಾಡುತ್ತೇವೆ. ಯಾರೇ ಆಡಿಕೊಂಡರೂ ಈ ವರ್ಷದ ಬಜೆಟ್ ನಲ್ಲೇ ಐದೂ ಘೋಷಣೆಗಳಿಗೂ ಹಣ ಕೊಡುತ್ತೇವೆ.ಸರ್ವ ಜನಾಂಗದ ಬಡವರು ಮತ್ತು ಮಧ್ಯಮ ವರ್ಗದವರು ಬಹಳ ಸಂಕಷ್ಟದಲ್ಲಿದ್ದಾರೆ. ಇವರ ಸಂಕಷ್ಟ ನಿವಾರಣೆಗೆ ಈ ಐದು ಘೋಷಣೆಗಳನ್ನು ಈಡೇರಿಸುತ್ತಿದ್ದೇವೆ ಎಂದರು.ನಾನು ಅಧಿಕಾರದಲ್ಲಿ ಇರುವವರೆಗೂ ಶೋಷಿತ ಜಾತಿಗಳಿಗೆ, ದಲಿತ ಸಮುದಾಯಗಳಿಗೆ, ಅಲ್ಪ ಸಂಖ್ಯಾತ ಸಮುದಾಯಗಳ, ಎಲ್ಲಾ ಜಾತಿಯ ಬಡವರ ಏಳಿಗೆಗೆ ಶ್ರಮಿಸುತ್ತೇನೆ. ಹೋರಾಟ ಮಾಡಿಯೇ ಮಾಡುತ್ತೇನೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *