ನವದೆಹಲಿ:ಮೊಬೈಲ್’ನಲ್ಲಿ ಟಿವಿ ವೀಕ್ಷಣೆಗೆ ಇಂಟರ್ನೆಟ್ ಇಲ್ಲದೇ ಸಾಧ್ಯವೇ ಇಲ್ಲ, ಕೆಲವೊಮ್ಮೆ ಸರಿಯಾದ ನೆಟ್‌ವರ್ಕ್ ಇಲ್ಲದೇ ಇಷ್ಟವಾದ ಕಾರ್ಯಕ್ರಮಗಳ ವೀಕ್ಷಣೆಗೂ ತೊಡಕು ಎದುರಾಗುತ್ತದೆ.
ಈ ಎಲ್ಲಾ ತೊಂದರೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು ನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದೆಯೇ ಟಿವಿ ವೀಕ್ಷಿಸಲು ಹೊಸ ತಂತ್ರಜ್ಞಾನ ರೂಪಿಸಲಾಗಿದೆ.
ಹಾಲಿ ಇರುವ ಡಿಟಿಎಚ್ (ಡೈರೆಕ್ಟ್ ಟು ಹೋಮ್) ತಂತ್ರಜ್ಞಾನಕ್ಕೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ವಿಶ್ವದಲ್ಲೇ ಮೊದಲನೆಯದು ಎನ್ನಲಾದ ಡೈರೆಕ್ಟ್ ಟು ಮೊಬೈಲ್ (ಡಿ2ಎಂ) ತಂತ್ರಜ್ಞಾನ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಲಿದೆ. ಬೆಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ಶೀಘ್ರವೇ ಡಿ2ಎಂ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.ಸಂಪೂರ್ಣವಾಗಿ ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನದ ವೈಶಿಷ್ಟ್ಯವೆಂದರೆ, ಸಿಮ್‌ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕ ಇಲ್ಲದೆಯೇ ಬಳಕೆದಾರರು ತಮ್ಮ ಮೊಬೈಲ್‌ಗಳಲ್ಲಿ ಟೀವಿ ಚಾನೆಲ್‌ಗಳ ನೇರಪ್ರಸಾರ ಸೇರಿದಂತೆ ಯಾವುದೇ ಕಾರ್ಯಕ್ರಮ ವೀಕ್ಷಿಸಬಹುದು. ಡಿಜಿಟಲ್ ಯುಗದಲ್ಲಿ ಕ್ರಾಂತಿಗೆ ಕಾರಣವಾಗುವುದರ ಜೊತೆಗೆ, ರಾಷ್ಟ್ರೀಯ ಭದ್ರತೆಗೆ ಅಪಾಯ, ರಾಷ್ಟ್ರೀಯ ವಿಪತ್ತಿನ ಸಂದರ್ಭಗಳಲ್ಲೂ ಈ ತಂತ್ರಜ್ಞಾನ ಅತ್ಯಂತ ಪರಿಣಾಮಕಾರಿಯಾದ ಕಾರಣ ಎಲ್ಲರ ಗಮನ ಇದೀಗ ಡಿ2ಎಂನತ್ತ ನೆಟ್ಟಿದೆ.
ಏನಿದು ತಂತ್ರಜ್ಞಾನ?:
ಹಿಂದೆ ದೂರದರ್ಶನದ ಕಾರ್ಯಕ್ರಮಗಳನ್ನು ದೇಶದ ವಿವಿಧ ಭಾಗಗಳಲ್ಲಿನ ಪ್ರಾದೇಶಿಕ ಪ್ರಸಾರ ಕೇಂದ್ರಗಳು ವಿವಿಧ ಸ್ಪೆಕ್ಟ್ರಂ ಮೂಲಕ ದೇಶದ ಮೂಲೆಮೂಲೆಗೂ ರವಾನಿಸುತ್ತಿದ್ದವು. ಗ್ರಾಹಕರ ಮನೆಯ ಮೇಲಿನ ಆ್ಯಂಟೆನಾಗಳು ಈ ಸಿಗ್ನಲ್‌ಗಳನ್ನು ಸ್ವೀಕರಿಸಿ ಟೀವಿಯಲ್ಲಿ ಬಿತ್ತರಿಸುತ್ತಿದ್ದವು. ಬಳಿಕ ಬಂದ ಡಿ2ಎಚ್ ತಂತ್ರಜ್ಞಾನದಲ್ಲಿ ಉಪಗ್ರಹಗಳು ರವಾನಿಸುವ ಸಂದೇಶಗಳನ್ನು ಮನೆಯ ಮೇಲೆ ಹಾಕುತ್ತಿದ್ದ ಡಿಶ್ ಆ್ಯಂಟೆನಾಗಳು ಸ್ವೀಕರಿಸಿ ಟೀವಿ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತಿದ್ದವು. ಜೊತೆಗೆ ಟೆಲಿಕಾಂ ಕಂಪನಿಗಳು ತಮ್ಮ ಟವರ್ ಮೂಲಕ ರವಾನಿಸುತ್ತಿದ್ದ ಸಿಗ್ನಲ್‌ಗಳನ್ನು ಬಳಸಿ ಗ್ರಾಹಕರು ಮೊಬೈಲ್‌ಗಳನ್ನೂ ಟೀವಿ ವೀಕ್ಷಿಸಬಹುದಿತ್ತು. ಆದರೆ ಇದಕ್ಕೆ ಮೊಬೈಲ್‌ನಲ್ಲಿ ಸಿಮ್ ಮತ್ತು ಅಂತರ್ಜಾಲ ಎರಡೂ ಕಡ್ಡಾಯವಾಗಿತ್ತು. ಆದರೆ ಡಿ2ಎಂ ಮೇಲಿನ ಬ್ರಾಡ್‌ಕಾಸ್ಟ್ ಮತ್ತು ಬ್ರಾಡ್‌ಬ್ಯಾಂಡ್ ಎರಡೂ ತಂತ್ರಜ್ಞಾನಗಳ ಮಿಶ್ರಣ ಇದ್ದಂತೆ. ಇಲ್ಲಿ ಯಾವುದೇ ಕಾರ್ಯಕ್ರಮವನ್ನು ದೂರದರ್ಶನದ ಪ್ರಾದೇಶಿಕ ಪ್ರಸಾರ ಕೇಂದ್ರಗಳ ಮೂಲಕ ವಿಶೇಷ ಸ್ಪೆಕ್ಟ್ರಂ ಬಳಸಿ ರವಾನಿಸಲಾಗುವುದು. ಇದನ್ನು ಸ್ವೀಕರಿಸುವ ತಂತ್ರಜ್ಞಾನ ಹೊಂದಿದ ಮೊಬೈಲ್ ಗ್ರಾಹಕರು ತಮ್ಮ ಮೊಬೈಲ್‌ಗಳಲ್ಲೇ ಸಿಮ್‌ಕಾರ್ಡ್ ಅಥವಾ ಇಂಟರ್ನೆಟ್ ಇಲ್ಲದೇ ಕಾರ್ಯಕ್ರಮ ವೀಕ್ಷಿಸಬಹುದು.
‘ಐಐಟಿ ಕಾನ್ಪುರ’ ಮತ್ತು ‘ಸಂಖ್ಯಾ ಲ್ಯಾಬ್’ ವಿಶ್ವದಲ್ಲೇ ಮೊದಲನೆಯದ್ದು ಎನ್ನಲಾದ ಈ ಡಿ2ಎಂ ತಂತ್ರಜ್ಞಾನವನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿವೆ. ಇದನ್ನು ಕಳೆದ ವರ್ಷ ಬೆಂಗಳೂರು ಸೇರಿ ಆಯ್ದ ನಗರಗಳಲ್ಲಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಇದೀಗ ಅದನ್ನು ಬೆಂಗಳೂರು ಸೇರಿದಂತೆ 19 ನಗರಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ತರಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಪೂರ್ವ ಚಂದ್ರ ಕಾರ್ಯಕ್ರಮವೊಂದರ ವೇಳೆ ಮಾಹಿತಿ ನೀಡಿದ್ದಾರೆ
ಇಂಟರ್ನೆಟ್ ಪದೇ ಪದೇ ಕೈಕೊಡಲು, ಅಲ್ಲಿ ಪ್ರಸಾರವಾಗುವ ಭಾರೀ ಪ್ರಮಾಣದ ಗುಣಮಟ್ಟದ ವಿಡಿಯೋಗಳೇ ಕಾರಣ. ಹೀಗಾಗಿ ಇಂಥ ವಿಡಿಯೋ ಅಥವಾ ಕಾರ್ಯಕ್ರಮಗಳನ್ನು ಡಿ2ಎಂ ಮೂಲಕ ಪ್ರಸಾರ ಮಾಡಿದರೆ ಮೊಬೈಲ್ ಜಾಲಗಳ ಮೇಲಿನ ನಿರ್ವಹಣಾ ಹೊರೆ ಕಡಿಮೆಯಾಗುತ್ತದೆ.
ದೇಶದಲ್ಲಿನ 28 ಕೋಟಿ ಮನೆಗಳ ಪೈಕಿ 19 ಕೋಟಿ ಮನೆಗಳಲ್ಲಿ ಮಾತ್ರ ಟೀವಿ ಸೆಟ್ ಇದೆ. ಅಂದರೆ ಕನಿಷ್ಠ 8-9 ಕೋಟಿ ಮನೆಗಳು ಟೀವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಿಂದ ವಂಚಿತವಾಗುತ್ತಿವೆ. ಮತ್ತೊಂದೆಡೆ ದೇಶದಲ್ಲಿ ಸದ್ಯ 80 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರಿದ್ದಾರೆ. ಇದರ ಬಳಕೆದಾರರ ಪೈಕಿ ಶೇ.69ರಷ್ಟು ಜನರು ವಿಡಿಯೋ ವೀಕ್ಷಣೆ ಮಾಡುತ್ತಾರೆ. ಹೀಗಾಗಿ ಡಿ2ಎಂ ತಂತ್ರಜ್ಞಾನದ ಮೂಲಕ ಮನೆಮನೆಗೂ ಕಾರ್ಯಕ್ರಮ ವೀಕ್ಷಣೆ ಸಾಧ್ಯವಾಗಿಸಬಹುದು.
ಸಿಮ್‌ಕಾರ್ಡ್, ಇಂಟರ್ನೆಟ್ ಅಗತ್ಯವಿಲ್ಲದ ಕಾರಣ ಈ ಸೇವೆ ಸಾಕಷ್ಟು ಅಗ್ಗವಾಗಿರುತ್ತದೆ ಮಾತ್ರವಲ್ಲದೇ ಇಂಟರ್ನೆಟ್ ಕೈಕೊಡುವ ಕಿರಿಕಿರಿ ಇಲ್ಲ .ಪ್ರಮುಖವಾಗಿ ಯುದ್ಧ ಮೊದಲಾದ ರಾಷ್ಟ್ರೀಯ ವಿಪತ್ತಿನ ವೇಳೆ ನಮ್ಮ ಉಪಗ್ರಹಗಳು ಕೈಕೊಟ್ಟರೆ, ಅಂತರ್ಜಾಲ ಕೈಕೊಟ್ಟಾಗ ಭೂಕಂಪ, ಸುನಾಮಿ ಮೊದಲಾದ ವಿಪತ್ತಿನ ಈ ವೇಳೆ ದೇಶದ ಕೋಟ್ಯಂತರ ಜನರಿಗೆ ಕ್ಷಣಾರ್ಧದಲ್ಲಿ ಯಾವುದೇ ಮಾಹಿತಿಯನ್ನು ಈ ತಂತ್ರಜ್ಞಾನದ ಮೂಲಕ ರವಾನಿಸಬಹುದಾಗಿದೆ.ಇಂತಹ ತಂತ್ರಜ್ಞಾನದಿಂದ ದೇಶದ ನಾಗರಿಕರ ಜತೆಗೆ ಸಂವಹನಕ್ಕೂ ಅನುಕೂಲವಾಗಲಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ