Share this news

ಕುಂದಾಪುರ : ಭಾನುವಾರ ಸಂಜೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತ ನೋಡಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರುಪಾಲಾದ ಭದ್ರಾವತಿಯ ಶರತ್ ಕುಮಾರ್ ಪತ್ತೆಯಾಗದ ಹಿನ್ನಲೆ ಡ್ರೋನ್ ಮೂಲಕ ಶೋಧ ಕಾರ್ಯಾಚರಣೆ ನಡೆಸಲಾಯಿತು.

ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯರು, ಶರತ್ ಸ್ನೇಹಿತರು ಸೇರಿದಂತೆ ಅನೇಕರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಡ್ರೋನ್ ಕ್ಯಾಮೆರಾ ಸಹಾಯದ ಮೂಲಕ ಹುಡುಕಾಟ ನಡೆಸಲಾಯಿತು. ಆದರೂ ಶರತ್ ಪತ್ತೆಯಾಗಿಲ್ಲ.

ಕೊಲ್ಲೂರು ದೇವಳಕ್ಕೆ ಬಂದಿದ್ದ ಶರತ್ ಸ್ನೇಹಿತನೊಂದಿಗೆ ಅರಿಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಜಲಪಾತದಲ್ಲಿ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಆಕಸ್ಮಿಕ ಕಾಲು ಜಾರಿ ನೀರುಪಾಲಾಗಿದ್ದರು. ಶರತ್ ಸ್ನೇಹಿತ ಜಲಪಾತದ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಶರತ್ ಬೀಳುವ ದೃಶ್ಯಾವಳಿಯೂ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಶರತ್ ನೀರುಪಾಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುವೈರಲ್ ಆಗಿತ್ತು.

ಭಾನುವಾರ ಸಂಜೆಯಿAದ ನಿರಂತರವಾಗಿ ಶರತ್‌ಗಾಗಿ ಹುಡುಕಾಟ ನಡೆಸಲಾಗಿತ್ತು. ಕೊಲ್ಲೂರು ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ಸಿಬ್ಬಂದಿ, ಎಸ್‌ಡಿಆರ್‌ಎಫ್, ಸ್ಥಳೀಯ ಯುವಕರು, ಈಜುಪಟು ಈಶ್ವರ್ ಮಲ್ಪೆ ಶರತ್ ಪತ್ತೆಗಾಗಿ ಸಾಕಷ್ಟುಹುಡುಕಾಟ ನಡೆಸಿದ್ದರು. ಆದರೂ ಶರತ್ ಪತ್ತೆಯಾಗದ ಹಿನ್ನೆಲೆ ಚಿತ್ರದುರ್ಗಾದ ಜ್ಯೋತಿ ರಾಜ್ ಅವರನ್ನು ಕರೆಸಲಾಗಿತ್ತು. ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಗಿತ್ತು.

Leave a Reply

Your email address will not be published. Required fields are marked *