ಕೋಟ : ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ತಾಲೂಕು ಈದು ಗ್ರಾಮದ ಹೊಸ್ಮರಿನ ಮೊಹಮ್ಮದ್ ರಿಯಾಜ್ ಯಾನೆ ರಿಯಾಜ್ (39 ವರ್ಷ) ಹಾಗೂ ಕಾಪು ಎಲ್ಲೂರು ಗ್ರಾಮದ ರಾಜೇಶ್ ದೇವಾಡಿಗ (38 ವರ್ಷ) ಬಂಧಿತ ಆರೋಪಿಗಳು .
ಆರೋಪಿಗಳಿಂದ ಪೊಲೀಸರು ಸುಮಾರು 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ,
ಕಳ್ಳತನದ ಹಣದಿಂದ ಖರೀದಿಸಿದ ಸುಮಾರು 2,50,000 ರೂ ಮೌಲ್ಯದ ಕಾರು, ಸುಮಾರು ಒಂದು ಲಕ್ಷ ಮೌಲ್ಯದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಗಳ ಪೈಕಿ ಕಾರ್ಕಳ ತಾಲೂಕು ಈದು ಗ್ರಾಮದ ಮೊಹಮ್ಮದ್ ರಿಯಾಜ್ ಯಾನೆ ರಿಯಾಜ್ 2018ರಲ್ಲಿ ಕಾರ್ಕಳದ ಫ್ಲೋರಿನ್ ಮಚಾದೊರ ಕೊಲೆ, ಸುಲಿಗೆ ಪ್ರಕರಣ, 2021 ರಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ರಾಜಧಾನಿ ಜುವೆಲರ್ಸ್ ನ ದರೋಡೆ ಪ್ರಕರಣದ ಆರೋಪಿಯಾಗಿದ್ದಾನೆ. ಇನ್ನೋರ್ವ ಆರೋಪಿ ರಾಜೇಶ್ ದೇವಾಡಿಗ ಹಳೆಯ ಕಳ್ಳತನದ ಆರೋಪಿಯಾಗಿದ್ದು ಜೈಲುವಾಸ ಅನುಭವಿಸಿ ಬಿಡುಗಡೆ ಹೊಂದಿರುತ್ತಾನೆ. ಈಗಾಗಲೇ ಈತನ ಮೇಲೆ ಕಾಪು, ಶಿರ್ವ, ಕಾರ್ಕಳ ಗ್ರಾಮಾಂತರ ಠಾಣೆ, ಪಡುಬಿದ್ರೆ ಠಾಣೆ ಹಾಗೂ ಉಡುಪಿ ನಗರ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಪ್ರಕರಣ ದಾಖಲಾಗಿರುತ್ತದೆ.
ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿ ಪರಿಚಯವಾಗಿದ್ದು ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಸಮಯದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕಳೆದ 2022ರ ಸೆಪ್ಟೆಂಬರ್ ನಲ್ಲಿ ಬ್ರಹ್ಮಾವರ ವೃತ್ತದ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ಬೆಂಗಳೂರಿನ ಹೋಟೆಲ್ ಉದ್ಯಮಿ ರಾಜೇಶ್ ಪೂಜಾರಿ ಅವರ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನ ನಡೆಸಿದ್ದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಅನುಮಾನಾಸ್ಪದ ಆರೋಪಿಗಳ ಮೇಲೆ ನಿಗಾ ವಹಿಸಿದ್ದರು.
ಈ ನಡುವೆ ಜನವರಿ 22ರಂದು ಕೋಟ ಠಾಣಾ ವ್ಯಾಪ್ತಿಯ ಸಾಯಬರಕಟ್ಟೆ ಬಳಿ ಪೊಲೀಸರ ವಿಶೇಷ ತಂಡವು ಆರೋಪಿಗಳನ್ನು ಪತ್ತೆ ಹಚ್ಚಲು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬಂದ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ರಾಜೇಶ್ ದೇವಾಡಿಗ ಮತ್ತು ಮಹಮ್ಮದ್ ರಿಯಾಜ್ ಹೊಸ್ಮಾರ್ ಇರುವುದು ಕಂಡುಬಂದಿದ್ದು, ಈ ವೇಳೆ ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ದಾಖಲೆಯಿಲ್ಲದ ಚಿನ್ನಾಭರಣಗಳು ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ 2022 ಸೆಪ್ಟೆಂಬರ್ ನಲ್ಲಿ ಸಾಸ್ತಾನದ ಚರ್ಚ್ ಬಳಿಯ ಮನೆಯಿಂದ ಕಳವು ಮಾಡಿರುವ ಚಿನ್ನಾಭರಣಗಳಾಗಿದ್ದು ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ ಎಚ್ ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್ ಟಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಅಧೀಕ್ಷಕ ದಿನಕರ ಕೆಪಿ ಅವರ ನಿರ್ದೇಶನದಂತೆ ಬ್ರಹ್ಮಾವರ ವೃತ್ತದ ಸಿಪಿಐ ಅನಂತ ಪದ್ಮನಾಭ, ಕೋಟ ಠಾಣಾ ಪಿ ಎಸ್ ಐ ಮಧು ಬಿ ಸೇರಿದಂತೆ ಪೊಲೀಸರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.