ನವದೆಹಲಿ: ಗಾಜಾ ಪಟ್ಟಿಯ ಮೇಲೆ ಭೂದಾಳಿ ಆರಂಭಿಸಿರುವ ಇಸ್ರೇಲ್ ಸೇನಾಪಡೆಯನ್ನು ಕಟ್ಟಿಹಾಕಲು ಹಮಾಸ್ ಉಗ್ರರು ಗಾಜಾಪಟ್ಟಿಯಲ್ಲಿ ನಿರ್ಮಾಣ ಮಾಡಲಾಗಿರುವ ಸುರಂಗ ಜಾಲದಲ್ಲಿ ಅಡಗಿ ದಾಳಿ ಮಾಡಲು ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ದಶಕಗಳಿಂದ ಸಂಘರ್ಷ ನಡೆಯುತ್ತಲೇ ಇದೆ. ಅ.7ರಂದು ಹಮಾಸ್ ಉಗ್ರರು 2 ಸಾವಿರಕ್ಕೂ ಹೆಚ್ಚು ರಾಕೆಟ್ ಮೂಲಕ ದಾಳಿ ನಡೆಸಿದ್ದರು. ಅತ್ಯಂತ ಶಕ್ತಿಶಾಲಿಯಾದ ಇಸ್ರೇಲ್ ಸೇನೆಯ ವಿರುದ್ಧ ಗೆಲ್ಲುವುದು ಅಸಾಧ್ಯ ಎಂಬುದು ತಿಳಿದಿದ್ದರೂ ಸಹ ಹಮಾಸ್ ಉಗ್ರರು ದಾಳಿ ಮಾಡಿರುವುದನ್ನು ನೋಡಿದರೆ, ಧೀರ್ಘಕಾಲ ನಡೆಯುವ ಈ ಯುದ್ಧಕ್ಕೆ ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬರುತ್ತದೆ.
ಅಲ್ಲದೇ ಗಾಜಾ ಪಟ್ಟಿಯಲ್ಲಿ ಗರಿಷ್ಠ 80 ಮೀ. ಆಳ ಇರುವ, ನೂರಾರು ಕಿ.ಮೀ. ದೂರ ಸಾಗುವ ಅನೇಕ ಸುರಂಗಗಳನ್ನು ಹಮಾಸ್ ಉಗ್ರರು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಸುಮಾರು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ಸಹ ಸಂಗ್ರಹಿಸಿಡಲಾಗಿದೆ. ಜೊತೆಗೆ ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಔಷಧಗಳನ್ನು ಉಗ್ರರು ಸಂಗ್ರಹಿಸಿಟ್ಟಿದ್ದಾರೆ. ಹೀಗಾಗಿ ಇಸ್ರೇಲ್ ದಾಳಿ ಮಾಡಿದರೂ ಸಹ ಈ ಸುರಂಗದೊಳಗೆ ಉಗ್ರರು ಹಲವು ದಿನಗಳವರೆಗೆ ರಕ್ಷಣೆ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಸ್ರೇಲ್ ಸೇನಾಪಡೆ ಗಾಜಾವನ್ನು ಪ್ರವೇಶಿಸಿದ ಬಳಿಕ ಸುರಂಗದೊಳಗಿಂದ ಅವರ ಮೇಲೆ ದಾಳಿ ಮಾಡಿ, ಸೈನಿಕರನ್ನು ಒತ್ತೆಯಾಗಿರಿಸಿಕೊಂಡು ಯುದ್ಧಕೈದಿಗಳನ್ನು ಬಿಡುಗಡೆ ಮಾಡಿಸಿಕೊಳ್ಳುವ ಯೋಜನೆ ರೂಪಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.






