ಕಾಸರಗೋಡು: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬ ಯುದ್ಧಾಪರಾಧಿಯಾಗಿದ್ದಾನೆ, ಆತನನ್ನು ವಿಚಾರಣೆಯಿಲ್ಲದೇ ಗುಂಡಿಕ್ಕಿ ಕೊಲ್ಲಬೇಕು ಎಂದು ಕೇರಳ ಕಾಂಗ್ರೆಸ್ ಸಂಸದ ರಾಜಮೋಹನ್ ಉನ್ನಿಥಾನ್ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧದ ನಡುವೆ ಕೇರಳದ ಕಾಸರಗೋಡಿನಲ್ಲಿ ನಡೆದ ಪ್ಯಾಲೆಸ್ತೀನ್ ಹಮಾಸ್ ಪರ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಉನ್ನಿಥಾನ್, ಎರಡನೆಯ ಮಹಾಯುದ್ಧದ ನಂತರ ಯುದ್ಧ ಅಪರಾಧಗಳಲ್ಲಿ ತೊಡಗಿರುವವರಿಗೆ ನ್ಯೂರೆಂಬರ್ಗ್ ಪ್ರಯೋಗಗಳನ್ನು ಬಳಸಲಾಗಿತ್ತು. ಈ ಪ್ರಯೋಗಗಳಲ್ಲಿ ಯುದ್ಧ ಅಪರಾಧಿಗಳನ್ನು ವಿಚಾರಣೆಯಿಲ್ಲದೇ ಗುಂಡಿಕ್ಕಿ ಕೊಲ್ಲಲಾಗಿತ್ತು. ನ್ಯೂರೆಂಬರ್ಗ್ ಮಾದರಿಯ ಪ್ರಯೋಗ ಕೈಗೊಳ್ಳಲು ಇದು ಉತ್ತಮ ಸಮಯ ಎಂದರು.ಬೆಂಜಮಿನ್ ನೆತನ್ಯಾಹು ವಿಶ್ವದ ಮುಂದೆ ಯುದ್ಧ ಅಪರಾಧಿಯಾಗಿ ನಿಂತಿದ್ದಾನೆ. ವಿಚಾರಣೆಯಿಲ್ಲದೇ ನೆತನ್ಯಾಹುವನ್ನು ಗುಂಡಿಕ್ಕಿ ಕೊಲ್ಲುವ ಸಮಯ ಬಂದಿದೆ, ಏಕೆಂದರೆ ಆತ ವಿಪರೀತ ಕ್ರೌರ್ಯ ತೋರಿಸುತ್ತಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧವು 43 ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಪ್ಯಾಲೇಸ್ಟಿನಿಯ ಹಮಾಸ್ ಭಯೋತ್ಪಾದಕ ಗುಂಪು ಇಸ್ರೇಲ್ ವಿರುದ್ಧ ದಾಳಿಯನ್ನು ಪ್ರಾರಂಭಿಸಿದ ನಂತರ ಯುದ್ಧ ಪ್ರಾರಂಭವಾಯಿತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಸೇನೆಯು ಗಾಜಾ ಪಟ್ಟಿ ಮತ್ತು ಪ್ಯಾಲೆಸ್ತೀನ್‌ನ ಕೆಲವು ಭಾಗಗಳ ಮೇಲೆ ಭೀಕರ ದಾಳಿ ನಡೆಸುತ್ತಿದೆ.