Share this news

ರಜೌರಿ (ಮೇ 6): ಸೇನಾ ವಾಹನದ ಮೇಲೆ ಏ.20ರಂದು ಗ್ರೆನೇಡ್‌ ದಾಳಿ ನಡೆಸುವ ಮೂಲಕ ಬೆಂಕಿ ಹಚ್ಚಿ ಐವರು ಯೋಧರನ್ನು ಹತ್ಯೆಗೈದ ಉಗ್ರಗಾಮಿಗಳನ್ನು ಬೇಟೆಯಾಡಲು ಹೋದಾಗ ದುರ್ಘಟನೆಯೊಂದು ಸಂಭವಿಸಿದೆ. ಗುಂಡಿನ ಚಕಮಕಿ ವೇಳೆ ಭಯೋತ್ಪಾದಕರು ಸ್ಫೋಟ ಮಾಡಿದ್ದರಿಂದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ, ಒಬ್ಬ ಮೇಜರ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದರ ಹೊರತಾಗಿಯೂ ಉಗ್ರರ ಹೆಡೆಮುರಿ ಕಟ್ಟಲು ಸೇನಾಪಡೆಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ರಜೌರಿಯಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 20ರಂದು ಜಮ್ಮುವಿನ ಪೂಂಛ್‌ನಲ್ಲಿ ಚಲಿಸುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಯೋಧರ ಶಸ್ತ್ರಾಸ್ತ್ರಗಳನ್ನು ಕಬಳಿಸಿ ಉಗ್ರರು ಪರಾರಿಯಾಗಿದ್ದರು. ನಾಪತ್ತೆಯಾದ ಉಗ್ರರಿಗಾಗಿ ಅಂದಿನಿಂದಲೂ ಸೇನೆ ಹುಡುಕಾಡುತ್ತಲೇ ಇತ್ತು. ಈ ನಡುವೆ, ರಜೌರಿ ಜಿಲ್ಲೆಯಲ್ಲಿ ಈ ಉಗ್ರರು ಅಡಗಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭಿಸಿತು. 

ಹೀಗಾಗಿ ರಜೌರಿ ಜಿಲ್ಲೆಯ ಕಾಂಡಿ ಅರಣ್ಯದಲ್ಲಿ ಬುಧವಾರದಿಂದ ಕಾರ್ಯಾಚರಣೆ ಆರಂಭಿಸಲಾಯಿತು. ಶುಕ್ರವಾರ ಬೆಳಗ್ಗೆ 7.30ರ ವೇಳೆಗೆ ಉಗ್ರರ ಜತೆ ಸಂಘರ್ಷ ಆರಂಭವಾಯಿತು. ಬಂಡೆಗಳಿಂದ ಕೂಡಿದ ಕಡಿದಾದ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಉಗ್ರರು ಸ್ಫೋಟಕವನ್ನು ಸಿಡಿಸಿದರು. ಸ್ಥಳದಲ್ಲೇ ಇಬ್ಬರು ಯೋಧರು ಮಡಿದರೆ, ಇನ್ನೂ ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Leave a Reply

Your email address will not be published. Required fields are marked *