ನವದೆಹಲಿ:ಸರ್ಕಾರದ ಆಡಳಿತ ನೀತಿಗಳಲ್ಲಿ ಹಣಕಾಸಿನ ಶಿಸ್ತು ಅತ್ಯಂತ ಅಗತ್ಯ.ರಾಜ್ಯ ಸರ್ಕಾರಗಳು ಆರ್ಥಿಕ ಶಿಸ್ತಿನ ಬಗ್ಗೆ ಪ್ರಜ್ಞೆ ಹೊಂದಿರಬೇಕು. ಉಚಿತ ಯೋಜನೆಗಳು ತಾತ್ಕಾಲಿಕ ರಾಜಕೀಯ ಲಾಭ ತರಬಹುದು. ಆದರೇ ಉಚಿತ ಕೊಡುಗೆಗಳು ದೇಶದ ಆರ್ಥಿಕ ವ್ಯವಸ್ಥೆಗೆ ಮಾರಕವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.
ಜಿ20 ಶೃಂಗಸಭೆ ಹಿನ್ನಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು,ಕೇವಲ ರಾಜಕೀಯ ಲಾಭಕ್ಕಾಗಿ ಸ್ಪಷ್ಟತೆಯಿಲ್ಲದ ಹಣಕಾಸು ನೀತಿಗಳು ಹಾಗೂ ಜನಪ್ರಿಯ ಕಾರ್ಯಕ್ರಮಗಳಿಂದ ಜನರಿಗೆ ತಾತ್ಕಾಲಿಕ ಲಾಭ ಸಿಗಬಹುದು ಇದರಿಂದ ಆರ್ಥಿಕತೆ ಕುಸಿಯಲಿದೆ ಎಂದು ಮೋದಿ, ಇಂತಹ ಕೊಡುಗೆಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಪರೋಕ್ಷವಾಗಿ ಉಚಿತ ಯೋಜನಗೆಳ ವಿರುದ್ಧ ಹರಿಹಾಯ್ದಿದ್ದಾರೆ.
ಜಾಗತಿಕ ಸಾಲದ ಬಿಕ್ಕಟ್ಟಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿತ್ತೀಯ ಶಿಸ್ತಿನ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಸಾಲದ ಬಿಕ್ಕಟ್ಟು, ಜಗತ್ತಿಗೆ ಅದರಲ್ಲೂ ವಿಶೇಷವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಅತ್ಯಂತ ಕಳವಳಕಾರಿ ವಿಚಾರವಾಗಿದೆ. ಸಾಲದ ಬಿಕ್ಕಟ್ಟಿಗೆ ಸಿಲುಕಿರುವ, ಬಿಕ್ಕಟ್ಟು ಅನುಭವಿಸುತ್ತಿರುವ ದೇಶಗಳ ಆರ್ಥಿಕ ಶಿಸ್ತಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.