Share this news

ಉಡುಪಿ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ, ಪಿ.ಎಫ್.ಐ ಸಮರ್ಥನೆ, ವಂಶ ರಾಜಕಾರಣ, ಅಸುರಕ್ಷಿತತೆ ಗ್ಯಾರೆಂಟಿಗಳು ಪ್ರಜೆಗಳಿಗೆ ಲಭಿಸಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳಿಗೆ ತಿರುಗೇಟು ನೀಡಿದರು.

ಅವರು ಕಟಪಾಡಿ ಗ್ರೀನ್ ವ್ಯಾಲಿ ಮೈದಾನದಲ್ಲಿ ಕಾಪು ಮತ್ತು ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಕಾರ್ಡ್‌ಗಳನ್ನು ಗುಜರಾತ್, ಅಸ್ಸಾಂ, ತ್ರಿಪುರ, ಮಣಿಪುರ, ಉತ್ತರ ಪ್ರದೇಶಗಳಲ್ಲಿಯೂ ಘೋಷಿಸಿತ್ತು. ಆದರೆ ಅಲ್ಲೆಲ್ಲಾ ಕಾಂಗ್ರೆಸ್ ಇದೆಯೋ ಎಂಬುದನ್ನು ದುರ್ಭೀನು ಮೂಲಕ ಹುಡುಕುವ ಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆ ಎಂದು ವ್ಯಂಗ್ಯವಾಡಿದರು.

 ದ.ಕ ಜಿಲ್ಲೆಯಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಜೀವವನ್ನು ವಾಪಾಸು ತರಲು ಸಾಧ್ಯವಿಲ್ಲ. ಆದರೆ ಹತ್ಯೆಗೈದ ಸಂಘಟನೆಯನ್ನು ನಿಷೇಧಿಸಿದ್ದೇವೆ. ಆ ಸಂಘಟನೆಯ ಸದಸ್ಯರಾಗಿದ್ದುಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸಲು ಕಾರಣಿಕರ್ತರಾದವನ್ನು ಜೈಲಿಗೆ ಕಳುಹಿಸಿದ್ದೇವೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಗಾಗಿ ಪಿ.ಎಫ್.ಐ ಸಂಘಟನೆಯನ್ನು ಸಮರ್ಥಿಸಿಕೊಂಡು ಪ್ರಕರಣಗಳನ್ನು ವಾಪಸು ಪಡೆದಿದೆ. ಬಿಜೆಪಿ ಯಾರಿಗೂ ಹೆದರುವುದಿಲ್ಲ. ಪಿ.ಎಫ್.ಐ ನಿಷೇಧದಿಂದ ದಕ್ಷಿಣ ಭಾರತ ಸುರಕ್ಷಿತವಾಗಿದೆ ಎಂದರು‌. 

ವರ್ಸ್ ಗೇರ್ ಸರಕಾರ ಬಂದರೇ ಪಿ.ಎಫ್.ಐ ಖೇಡರ್ ದೊಡ್ಡದಾಗುತ್ತದೆ. ಮುಸ್ಲಿಂ ಮೀಸಲಾತಿ ರದ್ದತಿಯನ್ನು ಮರು ಆರಂಭಿಸುತ್ತಾರೆ. ಎಸ್.ಸಿ, ಎಸ್.ಟಿ, ಲಿಂಗಾಯಿತ, ಒಕ್ಕಲಿಗರಿಗೆ ಬಿಜೆಪಿಯೂ ಮೀಸಲಾತಿಯನ್ನು ಏರಿಕೆ ಮಾಡಿದ್ದು, ಇವುಗಳಲ್ಲಿ ಯಾವ ಸಮುದಾಯಕ್ಕೆ ಮೀಸಲಾತಿಯನ್ನು ಇಳಿಕೆ ಮಾಡಿ, ಬಿಜೆಪಿ ರದ್ದುಗೊಳಿಸಿರುವ ಮುಸ್ಲಿಂ ಮೀಸಲಾತಿಯನ್ನು, ಮರು ಆರಂಭಿಸುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನಿಸಿದರು. ರಾಜ್ಯದಲ್ಲಿ ಬಿಜೆಪಿಯೂ ಪೂರ್ಣ ಬಹುಮತದೊಂದಿಗೆ ಸರಕಾರ ರಚಿಸುತ್ತದೆ. ಮುಸ್ಲಿಂ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಮರು ಆರಂಭಿಸಲು ಬಿಡುವುದಿಲ್ಲ, ಇದು ನಮ್ಮ ಸಂಕಲ್ಪ ಎಂದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಎಷ್ಟು ಸರಿ? ಸೋನಿಯಾ, ಪ್ರಿಯಾಂಕ, ಬಿ.ಕೆ ಹರಿಪ್ರಸಾದ್, ರಾಹುಲ್ ಬಾಬಾ ಸಹಿತ ಅನೇಕರು ಮೋದಿಯವರನ್ನು ನಿಂದಿಸಿದ್ದಾರೆ. ಯಾವಾಗೆಲ್ಲಾ ಮೋದಿಯವರನ್ನು ನಿಂದಿಸಿದ್ದಾರೋ, ಆವಾಗೆಲ್ಲಾ ಬಿಜೆಪಿಯ ಕಮಲವು ಅರಳಿದೆ. ಅದಕ್ಕೆ ಬಿಜೆಪಿಯ ಕಮಲ ಅರಳಿಸುವುದೇ ನಮ್ಮ ಉತ್ತರ ಎಂದರು.  70 ವರ್ಷಗಳಲ್ಲಿ ಕಾಂಗ್ರೆಸ್, ಬಗೆಹರಿಸಲು ಸಾಧ್ಯವಾಗದ ರಾಮಮಂದಿರ ವಿಚಾರವನ್ನು ಕಾನೂನಾತ್ಮಕವಾಗಿ ಬಗೆಹರಿಸಿ, ಮಂದಿರ ನಿರ್ಮಾಣವಾಗುವಂತೆ ಮೋದಿಯವರ ಸರಕಾರ ಮಾಡಿದೆ. ಯಾವ ಜಾಗದಲ್ಲಿ ಪ್ರಭು ಶ್ರೀರಾಮಚಂದ್ರ ಹುಟ್ಟಿದ್ದನೋ ಅಲ್ಲಿಯೇ ರಾಮಮಂದಿರ ತಲೆ ಎತ್ತುತ್ತಿದ್ದು, 2024 ರ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ ಎಂದರು. 

ಈ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಅಭ್ಯರ್ಥಿಗಳಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಸುವರ್ಣ, ಶಾಸಕರಾದ ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್, ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಉಪಾಧ್ಯಕ್ಷರಾದ  ಶ್ರೀಶಾ ನಾಯಕ್ ಪೆರ್ಣಂಕಿಲ, ಗೀತಾಂಜಲಿ ಸುವರ್ಣ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನಗರಾಧ್ಯಕ್ಷ ಮಹೇಶ್ ಠಾಕೂರ್, ಮಹಿಳಾಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ಶಿಲ್ಪಾ.ಜಿ.ಸುವರ್ಣ,ಎಸ್.ಸಿ. ಮೋರ್ಚಾ ರಾಜ್ಯ ಪ್ರ.ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಉಡುಪಿ ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ್, ಮಹಿಳಾಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪಕ್ಷದ ಚುನಾವಣಾ ಉಸ್ತುವಾರಿ ವಿಜಯೇಂದ್ರ ಗುಪ್ತಾ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *