ಉಡುಪಿ: ಕರಾವಳಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು,ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು(ಜು.6) ಕೂಡ ರಜೆ ಮುಂದುವರೆಸಲಾಗಿದೆ. ಬಹುತೇಕ ಎಲ್ಲಾ ಪ್ರದೇಶಗಳು ನೀರಿನಿಂದ ಜಲಾವೃತವಾಗಿ, ಹಲವು ಮನೆಗಳು ದ್ವೀಪದಂತಾಗಿದೆ. ಈ ಹಿನ್ನಲೆ ಜನರಿಗೆ ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚಿಸಿದೆ.
ಉಡುಪಿ ಜಿಲ್ಲೆಯ ಕೊಡಂಕೂರು ಭಾಗದಲ್ಲಿ ನೆರೆ ನೀರಿನಿಂದ ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದು ಅಗ್ನಿಶಾಮಕದಳ ಮಕ್ಕಳು ಮಹಿಳೆಯರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಲ್ಸಂಕ, ಬೈಲಕೆರೆ, ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.
ನಿರಂತರ ಮಳೆಯಿಂದ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಹಲವೆಡೆ ಮಳೆನೀರಿನಿಂದಾಗಿ ಕಾಲುವೆ ಬ್ಲಾಕ್ ಆಗಿ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿ ನಗರದ ತಗ್ಗು ಪ್ರದೇಶ, ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.