ಉಡುಪಿ: ವಿಶ್ವ ಮಾನವ ಸಂಸ್ಕೃತಿಯನ್ನು ಬಂಟ ಸಮುದಾಯ ಆಚರಿಸುತ್ತಿದೆ. ವಿಶಿಷ್ಠ ಸಂಸ್ಕೃತಿ, ಪರಂಪರೆ ಹೊಂದಿದ್ದು, ಬಂಟ ಸಮುದಾಯದವರು ಕನ್ನಡ ಚರಿತ್ರೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಉಡುಪಿಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಬಂಟ ಸಮಯದಾಯ ವಿಶ್ವದಾದ್ಯಂತ ವಿಸ್ತರಿಸಿ ಉದ್ಯಮಗಳನ್ನು ನಡೆಸುತ್ತಿದ್ದು, ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಂಟರು ಕ್ರೀಡೆ, ಸಿನಿಮಾ, ಶಿಕ್ಷಣ, ಹೋಟೆಲ್ ಉದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಲ್ಲೇ ಹೋದರು ತಮ್ಮ ಭಾಷೆ, ಸಂಸ್ಕೃತಿಯನ್ನು ಪಸರಿಸುತ್ತಾರೆ. ತುಳು ಮೇಲಿನ ನಿಮ್ಮಗಳ ಪ್ರೇಮ ಮತ್ತು ಅಕ್ಕರೆ ಅನುಕರಣೀಯ. ಪ್ರತಿಯೊಬ್ಬರು ಅವರವರ ಮಾತೃಭಾಷೆಗೆ ಗೌರವ ಕೊಡುವುದರಿಂದ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುತ್ತದೆ ಎಂದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಮಾತನಾಡಿ, ಕರ್ನಾಟಕಕ್ಕೆ, ಇಡೀ ಸಮಾಜಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರ, ಎಲ್ಲೆ ಹೋದರೂ ತಮ್ಮತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದರು. ಕಲೆ, ಕ್ರೀಡೆ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ಬಂಟರ ಸಮುದಾಯದವರನ್ನು ಕಾಣಬಹುದು. ಸ್ವಾತಂತ್ರ್ಯ ಹೋರಾಟದಲ್ಲೂ ಸಮುದಾಯದ ಹಲವು ಮಂದಿ ಪಾಲ್ಗೊಂಡಿದ್ದರು ಎಂದು ಸ್ಮರಿಸಿದರು.
ಹೊರ ರಾಜ್ಯ, ವಿದೇಶಗಳಲ್ಲಿ ಇರುವ ಬಂಟ ಸಮುದಾಯದವರನ್ನ ಒಗ್ಗೂಡಿಸುವ ಕೆಲಸವನ್ನು ಉಡುಪಿ-ಮಂಗಳೂರು ಬಂಟ ಸಮಾಜದವರು ಈ ಸಮ್ಮೇಳನದ ಮೂಲಕ ಮಾಡಿದ್ದಾರೆ ಎಂದರು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನನ್ನ ತವರು ಬೆಳಗಾವಿಯಲ್ಲಿ ಬಂಟ ಸಮುದಾಯದವರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಹೋಟೆಲ್ ಉದ್ಯಮಕ್ಕೆ ಬಂಟರ ಕೊಡುಗೆ ಅನನ್ಯ. ಬಂಟರ ಸಾಧನೆ ನೋಡಿದರೆ ಈ ಸಮುದಾಯದ ಮೇಲೆ ದೇವರ ಆಶೀರ್ವಾದವಿದೆ ಅಂತಾನೆ ಅರ್ಥ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಉಡುಪಿಯ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು, ವಿಧಾನಸಭೆಯ ಸಭಾಪತಿಗಳಾದ ಯು.ಟಿ.ಖಾದರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಶಾಸಕರಾದ ಗಣೇಶ್ ಹುಕ್ಕೇರಿ, ಯಶ್ಪಾಲ್ ಸುವರ್ಣ, ಅಶೋಕ್ ಕುಮಾರ್ ರೈ, ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ್ ರೈ, ವಿಶೇಷ ಅತಿಥಿಗಳಾಗಿ ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿರೇಖಾ ಆನಂದ ಶೆಟ್ಟಿ, ಎಂ.ಆರ್.ಜಿ ಗ್ರೂಪ್ ನ ಕೆ.ಪ್ರಕಾಶ್ ಶೆಟ್ಟಿ, ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ, ಅಭಯ ಚಂದ್ರ ಜೈನ್, ಜಿ.ಎ.ಭಾವ ಸೇರಿದಂತೆ ಹಲವು ಮುಖಂಡರು ಸೇರಿದಂತೆ ಬಂಟರ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ಪಥಸಂಚಲನದಲ್ಲಿ ಬಂಟರ ತಂಡಗಳು ಸಮವಸ್ತ್ರ ಧಾರಿಗಳಾಗಿ ಹೆಜ್ಜೆ ಹಾಕುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಪಥ ಸಂಚಲನದಲ್ಲಿ ಸಾಗಿಬಂದ ಕಂಬಳದ ಕೋಣಗಳು, ಹುಲಿ ವೇಷಧಾರಿಗಳು, ಚೆಂಡೆವಾದನ, ಯಕ್ಷಗಾನ ವೇಷ, ನೊಗ, ನೇಗಿಲು, ಏತ ನೀರಾವರಿಯ, ಮೊರಾಯಿ, ಮೊರ, ಕಲಶ, ಮೊದಲಾದ ಕೃಷಿ ಪರಿಕರಗಳೊಂದಿಗೆ ಸಾಗಿ ಬಂದ ಬಂಟರ ಸಂಘದ ಪ್ರತಿನಿಧಿಗಳು ನೆಲದ ಸಂಪ್ರದಾಯಗಳ ಕುರಿತು ತಮಗೆಷ್ಟು ತುಡಿತವಿದೆ ಎಂಬುದನ್ನು ತೋರ್ಪಡಿಸಿದರು.
ಪಡುಬಿದ್ರಿ, ಉಳ್ಳಾಲ, ಬಜಗೋಳಿ, ಮೀಂಜ, ಪುತ್ತೂರು, ಕಂಕನಾಡಿ, ಹಿರಿಯಡ್ಕ, ಬೈಂದೂರು, ಬೆಂಗಳೂರು, ಚಿಕ್ಕಮಗಳೂರು, ಶಂಕರಪುರ ಕಟಪಾಡಿ, ಕಳಸ, ಮೂಡುಬಿದಿರೆ, ಬಂಟ್ವಾಳ, ಅದ್ಯಪಾಡಿ, ಬಜಪೆ, ಮುಂಬೈ, ಮಂಜೇಶ್ವರ,ಕೊಡಗು, ಜೆಪ್ಪು, ಉಡುಪಿ ಗ್ರಾಮೀಣ, ಉಪ್ಪೂರು, ಪುತ್ತೂರು ನಗರ, ಗೋವಾ, ಜೆಪ್ಪಿನಮೊಗರು, ಸುರತ್ಕಲ್, ಸುಳ್ಯ, ಬೆಳ್ತಂಗಡಿ, ಕಾವೂರು, ಗುರುಪುರ, ಬೆಳ್ಮಣ್ಣು, ಬೆಳ್ಳಂಪಳ್ಳಿ, ಕುಕ್ಕುಂದೂರು, ಶಿರ್ವ, ಹಾವಂಜೆ, ಪುಣೆ, ಮೂಲ್ಕಿ, ಪಳ್ಳಿ ನಿಂಜೂರು, ಕುಂಬಳೆ ಕಾಸರಗೋಡು, ಮೈಸೂರು, ಕಾರ್ಕಳ, ಉಜಿರೆ, ಎಕ್ಕಾರು, ಕೊಡವೂರು, ಕುಂದಾಪುರ, ಉಡುಪಿ ಬಂಟರ ಸಂಘಗಳ ತಂಡಗಳು ಸೇರಿದಂತೆ ಒಟ್ಟು 62 ತಂಡಗಳು ಪಥಸಂಚಲನದಲ್ಲಿ ಭಾಗವಹಿಸಿದವು