ಉಡುಪಿ: ಆನ್‌ಲೈನ್‌ನಲ್ಲಿ ಸಾಲ ಪಡೆದು ಮರುಪಾವತಿಗೆ ಪದೇ ಪದೇ ಕರೆ ಮಾಡಿದ್ದರಿಂದ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಶಿವಳ್ಳಿಯಲ್ಲಿ ನಡೆದಿದೆ.
ಶಿವಳ್ಳಿ ನಿವಾಸಿ ರಾಘವೇಂದ್ರ ಎ ಶಾನುಭೋಗೆ (49) ಮೃತ ದುರ್ದೈವಿ. ಬಾಳಿಗಾ ಫಿಶ್‌ನೆಟ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಅವರು ಆನ್‌ಲೈನ್ ಆ್ಯಪ್‌ನಿಂದ ಸಾಲ ಪಡೆದಿದ್ದರು. ಅವರಿಗೆ, ಸಾಲ ಮರುಪಾವತಿ ಮಾಡುವಂತೆ ಪದೇ ಪದೇ ಕರೆ ಬರುತ್ತಿತ್ತು ಎನ್ನಲಾಗಿದೆ. ಪದೇ ಪದೇ ಕರೆಗಳು ಬರುತ್ತಿರುವುದರಿಂದ ಕಂಗೆಟ್ಟು ಮಾನಸಿಕ ಖಿನ್ನತೆಗೊಳಗಾದ ಅವರು ಹುಡ್ಕೋ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಲ ನೀಡುವ ಚೀನಾ ಮೊಬೈಲ್ ಅಪ್ಲಿಕೇಶನ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ಮಂಗಳೂರು ಪೊಲೀಸ್ ಆಯುಕ್ತರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಅಕ್ರಮವಾಗಿ ಸಾಲ ನೀಡಿ ಜನರನ್ನು ವಂಚಿಸುವ ಲೋನ್ ಆ್ಯಪ್‌ಗಳ ವಿರುದ್ಧ ಪೊಲೀಸರೂ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಆದಾಗ್ಯೂ, ಪದೇ ಪದೇ ಇಂಥ ಘಟನೆಗಳು ವರದಿಯಾಗುತ್ತಿವೆ.
ಚೀನೀ ಆ್ಯಪ್‌ಗಳು ಸಾಲ ನೀಡುವ ಮೊದಲು ಮೊಬೈಲ್‌ನಲ್ಲಿರುವ ದತ್ತಾಂಶಗಳ ಆ್ಯಕ್ಸೆಸ್ ಪಡೆದುಕೊಳ್ಳುತ್ತವೆ. ನಿಗದಿತ ಸಮಯದಲ್ಲಿ ಹಣ ಮರು ಪಾವತಿ ಮಾಡದಿದ್ದಾಗ ಆ ದತ್ತಾಂಶಗಳನ್ನು ಬಳಸಿಕೊಂಡು, ಗ್ರಾಹಕರ ವೈಯಕ್ತಿಕ ವಿವರಗಳನ್ನು ಮುಂದೊಡ್ಡಿ ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಅನುಸರಿಸುತ್ತವೆ. ಇದರಿಂದ ಮನನೊಂದು ಗ್ರಾಹಕರು ಅತ್ತ ದೂರು ನೀಡಲೂ ಆಗದೆ, ಹಣ ಪಾವತಿಸಲೂ ಆಗದೆ ನೊಂದು ಆತ್ಮಹತ್ಯೆಗೆ ಶರಣಾಗುತ್ತಾರೆ.