Share this news

ಉಡುಪಿ  : ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯ ಹೆಸರು ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಪೋಟಗೊಂಡಿದೆ. ಹಿರಿಯ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಪಕ್ಷೇತರವಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಮೊದಲೇ ಶಿಥಿಲಗೊಂಡಿದ್ದ ಜಿಲ್ಲಾ ಕಾಂಗ್ರೆಸ್ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಬಿಜೆಪಿ ಸೇರ್ಪಡೆಯ ನಂತರ ಹುಟ್ಟಿಕೊಂಡ ನಾಯಕರೆಲ್ಲರೂ ಟಿಕೆಟ್ ಆಕಾಂಕ್ಷಿಗಳಾದ ಪರಿಣಾಮವಾಗಿ, ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಪ್ರಸಾದ್ ರಾಜ್ ಕಾಂಚನ್ಅಭ್ಯರ್ಥಿ ಎಂದು ಘೋಷಿಸಿರುವ ಪಕ್ಷದ ನಿಲುವನ್ನು ಖಂಡಿಸಿ,  ಕೃಷ್ಣಮೂರ್ತಿ ಬಂಡಾಯ ಎದ್ದಿದ್ದಾರೆ. 

 

ನಗರ ಮಥುರಾ ಹೊಟೇಲಿನಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ, ಟಿಕೇಟ್ ಆಕಾಂಕ್ಷಿಯಾಗಿದ್ದ ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. 

ಸಭೆಯಲ್ಲಿ ಮಾತನಾಡಿದ ಕೃಷ್ಣಮೂರ್ತಿ, ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ನಾನು ತ್ಯಾಗ ಮಾಡಿದ್ದೇನೆ. ಆದರೆ ಬುಧವಾರ ರಾತ್ರಿಯವರೆಗೆ ನನ್ನ ಹೆಸರಿದ್ದ ಪಟ್ಟಿಯನ್ನು ಬದಲಾಯಿಸಿ, ಪರಿಚಯವೇ ಇಲ್ಲದ ವ್ಯಕ್ತಿಗೆ ಟಿಕೇಟ್ ನೀಡಿರುವುದು ಖಂಡನೀಯ. ಆಸ್ಕರ್ ಫೆರ್ನಾಂಡೀಸ್ ಅವರಿದ್ದಿದ್ದರೇ ನನಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. 2 ಬಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, 3 ಬಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗುವುದನ್ನು ತಪ್ಪಿಸಿದ್ದಾರೆ. 2 ಬಾರಿ ಜೈಲಿಗೂ ಹೋಗಿದ್ದೇನೆ. ಆದರೆ ಡಿ.ಕೆ.ಶಿವಕುಮಾರ್ ಅವರು ಆಸ್ಕರ್ ಫೆರ್ನಾಂಡಿಸ್ ಅವರ ಮರಣದ ದಿನ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇನ್ನೊಬ್ಬ ವ್ಯಕ್ತಿಯನ್ನು ನೇಮಕ ಮಾಡಿ ಸಹಿ ಹಾಕಿದ್ದಾರೆ.  ಇದಕ್ಕೆಲ್ಲಾ ಕಾರಣ ಪ್ರಮೋದ್ ಮಧ್ವರಾಜ್ ಎಂಬ ಸ್ವಾರ್ಥಿ ಎಂದು ಆರೋಪಿಸಿದರು. 

ಇಟ್ಟ ಹೆಜ್ಜೆಯನ್ನು ಹಿಂದೆ ಇಡುವ ಮಾತಿಲ್ಲ. ಹೋರಾಟದ ಮೂಲಕವೇ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದೇನೆ. ಈ ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದೇ ಸಿದ್ದ ಎಂದು ಶಪಥ ಮಾಡಿದರು. 

ಕಾಂಗ್ರೆಸ್ ನ ಹಿರಿಯ ಮುಖಂಡ ಸದಾನಂದ ಕಾಂಚನ್ ಮಾತನಾಡಿ, ಕಾಂಗ್ರೆಸ್ ಪಕ್ಷದ ವಿರುದ್ದ ಈ ಸಭೆಯನ್ನು ಕರೆದಿಲ್ಲ. ಕೃಷ್ಣಮೂರ್ತಿಯವರ ಮೇಲಿನ ಅನುಕಂಪದಿಂದ ಸಭೆ ಸೇರಿದ್ದೇವೆ. ಕೃಷ್ಣಮೂರ್ತಿಯವರಿಗೆ ರಾಜ್ಯ ಕೆಪಿಸಿಸಿಯ ಕಾರ್ಯದರ್ಶಿ, ಅಥವಾ ವಿಧಾನ ಪರಿಷತ್ ಸದಸ್ಯನಾಗಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಕ್ಷಣ ಘೋಷಣೆ ಮಾಡಬೇಕು ಎಂದರು. 

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಯ ಶೆಟ್ಟಿ ಬನ್ನಂಜೆ, ಗಣೇಶ್ ಕೋಟ್ಯಾನ್, ಗಾಯತ್ರಿ, ಶಿವರಾಜ್ ಮಲ್ಲಾರ್, ವಿಜಯ ಪೂಜಾರಿ, ಯಶೋಧರ ಮಲ್ಪೆ, ಅಮೃತಾ ಕೃಷ್ಣಮೂರ್ತಿ ಸೇರಿದಂತೆ ನೂರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು. 

Leave a Reply

Your email address will not be published. Required fields are marked *