ಉಡುಪಿ: ಉಡುಪಿಯ ಪ್ರತಿಷ್ಠಿತ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಣ ಮಾಡಿದ ಮುಸ್ಲಿಂ ವಿದ್ಯಾರ್ಥಿನಿಯರ ಮೇಲೆ ಕೊನೆಗೂ ಉಡುಪಿ ಜಿಲ್ಲಾ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಮಹಿಳಾ ಶೌಚಗೃಹದಲ್ಲಿ ಹಿಂದೂ ಹುಡುಗಿಯರ ಅರೆನಗ್ನ ವೀಡಿಯೋಗಳನ್ನು ಮಾಡಿ ಮುಸ್ಲಿಂ ಗುಂಪುಗಳಿಗೆ ಹರಿದು ಬಿಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ಅಮಾನತುಗೊಳಿಸಿತ್ತು. ಆದರೆ, ಈ ಬಗ್ಗೆ ಜನಾಕ್ರೋಶ ಹೆಚ್ಚಾದ ಹಿನ್ನೆಲೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ.
ಉಡುಪಿಯ ನೇತ್ರ ಕಾಲೇಜು ಶೌಚಾಲಯದಲ್ಲಿ ಕದ್ದಮುಚ್ಚಿ ಮೊಬೈಲ್ ಫೋನ್ ಇಟ್ಟು ಚಿತ್ರೀಕರಣ ಮಾಡಿದ ವಿಚಾರಕ್ಕೆ ಸಂಬAಧಿಸಿ ನಿನ್ನೆ (ಜುಲೈ 25) ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಾರ ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜು ವಿಚಾರ ಮಾಧ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ವಿಚಾರದ ಜೊತೆ ಬೇರೆ ಬೇರೆ ಉದ್ದೇಶದಿಂದ ಮಾಹಿತಿಗಳು ಶೇರ್ ಆಗುತ್ತಿದೆ. ಹಿಡನ್ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿದ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಬೇರೆ ಕಡೆ ವಿಡಿಯೋ ಶೇರ್ ಆಗುತ್ತಿದೆ, ವಾಯ್ಸ್ ಎಡಿಟ್ ಮಾಡಲಾಗಿದೆ. ಸತ್ಯಾಸತ್ಯತೆ ಗೊತ್ತಿಲ್ಲದೆ ಎಲ್ಲೆಡೆ ವಿಡಿಯೋ ಶೇರ್ ಮಾಡಿದ್ರೆ ತಪ್ಪಾಗುತ್ತದೆ. ಅಲ್ಲದೆ ವೈರಲ್ ಆಗಿರುವ ಬಗ್ಗೆ ಫೇಸ್‌ಬುಕ್, ವಾಟ್ಸಾಪ್ ಮೇಲೆ ನಿಗಾ ಇರಿಸಲಾಗಿದೆ. ರಶ್ಮಿ ಸಾವಂತ್ ಹೆಸರಿನಲ್ಲಿ ಟ್ವೀಟ್ ಬಗ್ಗೆ ಅಕೌಂಟ್ ಪರಿಶೀಲಿಸಿದ್ದೇವೆ. ಇದೇ ವಿಚಾರದಲ್ಲಿ ಅವರ ಮನೆಯವರ ಬಳಿ ಮಾತನಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನು ಈ ಪ್ರಕರಣ ಸಂಬAಧ ನೇತ್ರಜ್ಯೋತಿ ಕಾಲೇಜು ಆಡಳಿತ ಮಂಡಳಿ, ತಮಾಷೆಗೆ ವಿಡಿಯೋ ಮಾಡಿರುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಚಾರ ತಿಳಿಯುತ್ತಿದ್ದಂತೆ ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ಸ್ಪಷ್ಟನೆ ನೀಡಿದ್ದರು.
ಜುಲೈ 18 ಉಡುಪಿಯ ಖಾಸಗಿ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಹಿಂದೂ ವಿದ್ಯಾರ್ಥಿನಿ ಮಧ್ಯೆ ಜಗಳ ನಡೆದಿತ್ತು. ಇದೇ ಸಮಯದಲ್ಲಿ ಶೌಚಾಲಯದಲ್ಲಿದ್ದ ಹಿಂದೂ ವಿದ್ಯಾರ್ಥಿನಿ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ ಎನ್ನುವ ಸುದ್ದಿ, ಕಾಲೇಜು ಆಡಳಿತ ಮಂಡಳಿಗೂ ಮುಟ್ಟಿತ್ತು. ತಕ್ಷಣ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿತ್ತು. ಹಿಂದೂ ವಿದ್ಯಾರ್ಥಿನಿ ದೂರು ಕೂಡ ನೀಡಲು ಮುಂದಾಗಿರಲಿಲ್ಲ. ಅಲ್ಲಿಗೆ ವಿಷಯ ಮುಗಿಯುತ್ತೆ ಅಂದುಕೊAಡು ಆಡಳಿತ ಮಂಡಳಿ ಸುಮ್ಮನಾಗಿತ್ತು. ಈ ಸುದ್ದಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜುಲೈ 20 ರಂದು ಕಾಲೇಜಿಗೆ ಭೇಟಿ ನೀಡಿದ್ದರು. ಆದರೆ ವಿದ್ಯಾರ್ಥಿನಿಯರನ್ನ ಅಮಾನತು ಮಾಡಿರುವ ವಿಷಯ ತಿಳಿದು ವಾಪಸಾಗಿದ್ದರು.
ಅಷ್ಟರಲ್ಲೇ ವಾಟ್ಸಾಪ್ ಗ್ರೂಪ್‌ಗಳಲ್ಲಿ ವೀಡಿಯೋ ವಿಚಾರ ವೈರಲ್ ಆಗಿತ್ತು. ಹಿಂದೂ ಯುವತಿಯರ ವಿಡಿಯೋಗಳನ್ನ ಮುಸ್ಲಿಂ ಯುವಕರಿಗೆ ಕಳಿಸಲಾಗುತ್ತಿದೆ ಎನ್ನುವ ಆರೋಪ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದೇ ಹೊತ್ತಿಗೆ ಲಂಡನ್ ಆಕ್ಸ್ಫರ್ಡ್ ವಿವಿಯ ಮಾಜಿ ವಿದ್ಯಾರ್ಥಿ ನಾಯಕಿ ರಶ್ಮಿ ಸಾಮಂತ್ ಮಾಡಿದ ಟ್ವೀಟ್ ಬೆಂಕಿಗೆ ತುಪ್ಪ ಸುರಿದಿದ್ದು, ನೂರಾರು ಹಿಂದೂ ಯುವತಿಯರ ವಿಡಿಯೋ ಮಾಡಿದ್ದಾರೆ ಎಂದು ಗಂಭೀರ ಆರೋಪ ಭಾರಿ ಗದ್ದಲ ಎಬ್ಬಿಸಿತ್ತು. ಇದೀಗ ಈ ಪ್ರಕರಣ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದು ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.