ಉಡುಪಿ: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಂಬAಧ ಮೂರು ಮಂದಿ ಆರೋಪಿತ ವಿದ್ಯಾರ್ಥಿನಿಯರನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಈ ಮೂವರೂ ವಿದ್ಯಾರ್ಥಿನಿಯರು ಈಗಾಗಲೇ ತಾವು ಶೌಚಾಲಯದಲ್ಲಿ ಇನ್ನೊಬ್ಬ ವಿದ್ಯಾರ್ಥಿನಿಯ ವಿಡಿಯೋ ಮಾಡಿರುವುದು ಹೌದು, ಆದರೆ ನಂತರ ಅದನ್ನು ಡಿಲೀಟ್ ಮಾಡಿರುವುದಾಗಿ ಕಾಲೇಜಿಗೆ ಲಿಖಿತ ತಪ್ಪೊಪ್ಪಿಗೆ ನೀಡಿದ್ದಾರೆ. ಆದ್ದರಿಂದ ಈ ಕಾಲೇಜಿನಲ್ಲಿ ವಿಡಿಯೋ ಪ್ರಕರಣ ನಡೆದಿರುವುದನ್ನು ಸಾಬೀತು ಮಾಡುವಲ್ಲಿ ಸಿಐಡಿಗೆ ಈ ಆರೋಪಿಗಳ ಹೇಳಿಕೆ ಮುಖ್ಯ ಪಾತ್ರ ವಹಿಸಲಿದೆ.
ಜ.18ರಂದು ನಡೆದ ಈ ಘಟನೆಯ ಬಗ್ಗೆ ಪೊಲೀಸರು ಆರಂಭಿಕ ನಿರ್ಲಕ್ಷö್ಯದ ನಂತರ ಜ.27ರಂದು ಎಫ್‌ಐಆರ್ ದಾಖಲಿಸಿದ ಬಳಿಕ, ಆರೋಪಿಗಳು ತಾವಾಗಿಯೇ ನ್ಯಾಯಾಲಯಕ್ಕೆ ಶರಣಾಗಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ನೀಡಿದ್ದರು. ಸಿಐಡಿ ಪೊಲೀಸರು ನ್ಯಾಯಾಲಯದಿಂದಲೂ ಆರೋಪಿಗಳ ಹೇಳಿಕೆಗಳ ಪ್ರತಿ ಪಡೆದುಕೊಂಡಿದ್ದಾರೆ.
ಬುಧವಾರ ಸಂತ್ರಸ್ತ ಯುವತಿಯ ಹೇಳಿಕೆಯನ್ನೂ ಪಡೆದುಕೊಂಡ ಸಿಐಡಿ ತನಿಖಾಧಿಕಾರಿ ಅಂಜುಮಾಲ ಅವರು ನ್ಯಾಯಾಲಯದಿಂದಲೂ ಆಕೆಯ ಹೇಳಿಕೆಯ ಪ್ರತಿಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನೊಂದು ವಾರದೊಳಗೆ ವರದಿ ಬರಲಿದೆ ಎನ್ನಲಾಗಿದೆ.
ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದ್ದAತೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಸರ್ಕಾರದ ಸೂಚನೆಯಂತೆ ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ, ಡಿವೈಎಸ್ಪಿ ಅಂಜುಮಾಲಾ ಪ್ರಕರಣದ ಪ್ರತಿಯೊಂದು ಆಯಾಮವನ್ನೂ ಪರಿಶೀಲಿಸುತಿದ್ದಾರೆ.