Share this news

ಉಡುಪಿ : ಕರ್ನಾಟಕದ ಧಾರ್ಮಿಕ ಪರಂಪರೆಗಳ ಕೀರ್ತಿಯನ್ನು ಹೆಚ್ಚಿಸಿದ ಉಡುಪಿಯ ಪುತ್ತಿಗೆ ಮಠದಲ್ಲಿ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ಅನ್ನಬ್ರಹ್ಮ ಶ್ರೀಕೃಷ್ಣನಿಗೆ ಅಕ್ಕಿಯ ಮುಹೂರ್ತವನ್ನು ನೆರವೇರಿಸಲಾಯಿತು.

ಈ ನಾಡಿನ ಧಾರ್ಮಿಕ ಪರಂಪರೆಯಲ್ಲಿ ಉಡುಪಿ ಕೃಷ್ಣನ ಪರ್ಯಾಯೋತ್ಸವಕ್ಕೆ ವಿಶೇಷ ಮಾನ್ಯತೆಯಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸಾಂಪ್ರದಾಯಿಕ ಆಚರಣೆಗೆ ಉಡುಪಿ ಕೃಷ್ಣಮಠ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ವಿದೇಶಗಳಲ್ಲಿ ಕೃಷ್ಣ ಭಕ್ತಿ ಪ್ರಚಾರ ನಡೆಸುತ್ತಿರುವ ಪುತ್ತಿಗೆ ಶ್ರೀಗಳು ಮುಂದಿನ ಸರದಿಯಲ್ಲಿ (2024 ಜನವರಿ) ಕೃಷ್ಣನ ಪೂಜೆಯ ಅಧಿಕಾರ ಪಡೆಯಲಿದ್ದಾರೆ. ಈ ಪ್ರಯುಕ್ತ ನಡೆದ ಅಕ್ಕಿ ಮುಹೂರ್ತ ಕರಾವಳಿಯ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯ್ತು.

ಅಷ್ಟಮಠಗಳ ರಥಬೀದಿಯಲ್ಲಿ ಅಪರೂಪದ ಧಾರ್ಮಿಕ ಆಚರಣೆಗಳು ನಡೆದವು. ಅಕ್ಕಿಯ ರಾಶಿಯನ್ನು ಹುಲ್ಲಿನ ಮೂಟೆಯಲ್ಲಿ (ಅಕ್ಕಿಮುಡಿ) ಹೊತ್ತು ಸಾಗುವ ಈ ಸಾಂಪ್ರದಾಯಿಕ ಆಚರಣೆಯನ್ನು ಅಕ್ಕಿಮುಹೂರ್ತ ಎಂದು ಕರೆಯುತ್ತಾರೆ. ಉಡುಪಿ ಕೃಷ್ಣನ ಪೂಜಾಧಿಕಾರವನ್ನು ಎಂಟು ಮಂದಿ ಮಠಾಧೀಶರು ತಲಾ ಎರಡು ವರ್ಷಕ್ಕೊಮ್ಮೆ ಹಸ್ತಾಂತರ ಮಾಡುತ್ತಾರೆ. ಸದ್ಯ ಕೃಷ್ಣಾಪುರ ಮಠಾಧೀಶರ ಪರ್ಯಾಯ ನಡೆಯುತ್ತಿದೆ. 2024 ಜನವರಿಯಲ್ಲಿ ಪುತ್ತಿಗೆ ಸ್ವಾಮೀಜಿ ಅಧಿಕಾರ ಪಡೆಯಲಿದ್ದಾರೆ.

ಈ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ಅಕ್ಕಿಮುಹೂರ್ತ ನಡೆಯಿತು. ಅಷ್ಟಮಠಗಳ ರಥಬೀದಿಯಲ್ಲಿ ಅಕ್ಕಿಯ ಮುಡಿಗಳನ್ನು ಹೊತ್ತು ಮೆರವಣಿಗೆ ನಡೆಯಿತು. ಮಠದ ಭಕ್ತರು ತಲೆಯಲ್ಲಿ ಅಕ್ಕಿಯ ಮುಡಿಗಳನ್ನು ಹೊತ್ತು ರಥ ಬೀದಿಗೆ ಪ್ರದಕ್ಷಿಣೆ ಬಂದು ಪುತ್ತಿಗೆ ಮಠದಲ್ಲಿ ಮುಡಿಗಳನ್ನು ಸಂಗ್ರಹಿಸಿದರು. ಅಷ್ಟಮಠಗಳ ಪರಂಪರೆಯಲ್ಲಿ ಪುತ್ತಿಗೆ ಮಠಕ್ಕೆ ವಿಶೇಷ ಸ್ಥಾನಮಾನ ಇದೆ. ಕರ್ನಾಟಕ ಮಾತ್ರವಲ್ಲದೆ ಅಮೆರಿಕ, ಆಸ್ಟ್ರೇಲಿಯಾದಂತ ವಿದೇಶಗಳಲ್ಲೂ ಪುತ್ತಿಗೆ ಮಠ ತನ್ನ ಶಾಖೆಗಳನ್ನು ಹೊಂದಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸನಾತನ ಸಂಸ್ಕೃತಿ ಮತ್ತು ಕೃಷ್ಣ ಭಕ್ತಿಯನ್ನು ಪಸರಿಸುತ್ತಿದೆ. ವಿದೇಶಗಳಲ್ಲಿ ಚರ್ಚುಗಳನ್ನು ಲೀಸ್ ಗೆ ಪಡೆದು ಕೃಷ್ಣ ಮಂದಿರ ಸ್ಥಾಪಿಸಿ, ಭಾರತೀಯ ಪರಂಪರೆಯನ್ನು ಪರಿಚಯಿಸುತ್ತಿದ್ದಾರೆ.

ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ತಮ್ಮ ಶಿಷ್ಯ ಶ್ರೀ ಸುಶೀಂದ್ರ ತೀರ್ಥರ ಜೊತೆಯಾಗಿ ಈ ಪರ್ಯಾಯ ಮಹೋತ್ಸವ ನಡೆಸಲಿದ್ದಾರೆ. ಉಡುಪಿ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಶತಮಾನಗಳಿಂದ ಇಲ್ಲಿ ನಡೆಯುವ ಅನ್ನದಾನಕ್ಕೆ ವಿಶೇಷ ಮಹತ್ವ ಇದೆ. ಭಕ್ತರ ದಾಸೋಹಕ್ಕೆ ಬೇಕಾದ ಅಕ್ಕಿಯ ಸಂಗ್ರಹ ಮಾಡುವುದು ಈ ಮುಹೂರ್ತದ ಉದ್ದೇಶ. ಉಡುಪಿಯ ರಥಬೀದಿಗೆ ಪೂರ್ವ ದ್ವಾರ ನಿರ್ಮಿಸಿ ಕೃಷ್ಣನ ಮೂರ್ತಿ ಸ್ಥಾಪಿಸುವ ವಿಶೇಷ ಯೋಜನೆಯನ್ನು ಪುತ್ತಿಗೆ ಶ್ರೀಗಳು ಕೈಗೊಂಡಿದ್ದಾರೆ. ಇಂತಹ ಅಪರೂಪದ ಸಂಪ್ರದಾಯಗಳಿAದಲೇ ಪರ್ಯಾಯಕ್ಕೆ ನಾಡಹಬ್ಬದ ಗೌರವ ಸಿಕ್ಕಿದೆ.

 

 

 

 

Leave a Reply

Your email address will not be published. Required fields are marked *