ಉಡುಪಿ: ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಪ್ರಕರಣ ಜುಲೈ 18 ರಂದು ಬೆಳಕಿಗೆ ಬಂದಿತ್ತು. ವಿದ್ಯಾರ್ಥಿನಿಯರು ಪ್ರತಿಭಟಿಸಲು ಆರಂಭಿಸಿದಾಗ ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ವಿದ್ಯಾರ್ಥಿನಿಯ ಪ್ರತಿಭಟನೆಗೆ ಎಬಿವಿಪಿ ಶಕ್ತಿ ತುಂಬಿತ್ತು. ನಂತರ ಬಿಜೆಪಿ ಕೂಡ ಎಂಟ್ರಿ ಕೊಟ್ಟಿತ್ತು.
ಪ್ರಕರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಬದಲಾಗಿ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿತ್ತು. ಇದು ಪ್ರತಿಭಟನಾ ನಿರತರನ್ನು ಇನ್ನಷ್ಟು ಕೆರಳಿಸಿತ್ತು. ಆರೋಪಿಗಳಾದ ಮುಸ್ಲಿಂ ವಿದ್ಯಾರ್ಥಿನಿಯರ ಪರ ಸರ್ಕಾರ ನಿಂತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದವು. ಬಳಿಕ ಎಚ್ಚೆತ್ತ ಮಲ್ಪೆ ಪೊಲೀಸರು, ಜುಲೈ 26ರಂದು ಸುಮೋಟೋ ಕೇಸ್ ದಾಖಲಿಸಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರ ತನಿಖೆ ವಿರುದ್ಧವೇ ಅಪಸ್ವರಗಳು ಕೇಳಿಬಂದಿದ್ದವು. ತನಿಖಾಧಿಕಾರಿಗಳ ಬದಲಾವಣೆಗೆ ಒತ್ತಡ ಬಂದ ಹಿನ್ನೆಲೆ ಹೊಸ ತನಿಖಾಧಿಕಾರಿಯನ್ನು ನೇಮಿಸಲಾಗಿತ್ತು. ಈ ನಡುವೆ ಆರೋಪಿ ವಿದ್ಯಾರ್ಥಿನಿಯೊಬ್ಬಳ ತಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತ ಎಂದು ಬಜರಂಗದಳ ಆರೋಪಿಸಿತ್ತು. ಆರು ತಿಂಗಳಿನಿAದ ಈ ರೀತಿ ಚಿತ್ರೀಕರಣ ಮಾಡುತ್ತಿದ್ದು, ದೂರು ನೀಡಿದ್ದರೂ ಆಡಳಿತ ಮಂಡಳಿ ಕ್ಯಾರೇ ಎನ್ನುತ್ತಿರಲಿಲ್ಲ. ವಿಡಿಯೋ ಮಾಡಿ ಮೊಬೈಲ್‌ಗಳನ್ನು ಹೊರಗಿನ ಮುಸ್ಲಿಂ ಯುವಕರಿಗೆ ನೀಡುತ್ತಿದ್ದರು ಎಂಬ ಗಂಭೀರ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದರು.
ಈ ಎಲ್ಲದರ ನಡುವೆ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರಿಗೆ ಬಿಜೆಪಿ ಮನವಿ ಮಾಡಿತ್ತು. ಸದ್ಯ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ಒಪ್ಪಿಸಿ ಆದೇಶಿಸಿದೆ.