Share this news

ಉಡುಪಿ : ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ 233 ಮಹಿಳಾ ದೌರ್ಜನ್ಯ, 73 ಕೌಟುಂಬಿಕ ಹಿಂಸಾಚಾರ ಹಾಗೂ 38 ಪೋಕ್ಸೋ ಪ್ರಕರಣ ದಾಖಲಾಗಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿದ್ಯಾಕುಮಾರಿ ಖಡಕ್ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ವಿವಿಧ ಸಭೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸರಕಾರ ಅನೇಕ ಕಾನೂನು ಹಾಗೂ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದರು. ನೊಂದ ಮಹಿಳೆಯರಿಗೆ ನೆರವು ನೀಡಲು ಜಿಲ್ಲೆಯಲ್ಲಿ ಸಖೀ ಒನ್‌ ಸ್ಟಾಪ್‌ ಸೆಂಟರ್‌ ಆರಂಭಿಸಲಾಗಿದ್ದು, ಸಂಕಷ್ಟದಲ್ಲಿರುವ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳೆಯರ ಮೇಲಿನ ದೌರ್ಜನ್ಯದ 233 ಪ್ರಕರಣಗಳಲ್ಲಿ 181 ಪ್ರಕರಣಗಳು ಇತ್ಯರ್ಥಗೊಂಡಿವೆ. ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ 73ರಲ್ಲಿ 49 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ 38 ಪ್ರಕರಣಗಳು ದಾಖಲಾಗಿದ್ದು, 23 ಪ್ರಕರಣಗಳು ನ್ಯಾಯಾಲಯದಲ್ಲಿವೆ. 10 ಪ್ರಕರಣಗಳು ತನಿಖೆಯ ಹಂತದಲ್ಲಿ ಇದೆ ಎಂದರು.

ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು. ಮಾತೃ ವಂದನ ಯೋಜನೆಯ ಬಗ್ಗೆ ಗರ್ಭಿಣಿಯವರಿಗೆ ಅಂಗನವಾಡಿಗಳ ಮೂಲಕ ಮಾಹಿತಿ ನೀಡಿ, ಅರ್ಹರಿಗೆ ಯೋಜನೆಯ ಫಲ ಸಿಗುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿ. ಪಂ. ಸಿಇಒ ಪ್ರಸನ್ನ ಎಚ್‌., ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್‌., ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಡಿವೈಎಸ್‌ಪಿ ದಿನಕರ್‌ ಪಿ.ಕೆ., ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

 

 

 

 

Leave a Reply

Your email address will not be published. Required fields are marked *