ಉಡುಪಿ: ಉಡುಪಿಯ ನೇತ್ರ ಖಾಸಗಿ ಕಾಲೇಜಿನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರು ಟಾಯ್ಲೆಟ್ ಗೆ ಹೋದಾಗ ವಿಡಿಯೋ ಮಾಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯವಾದಿ ಚಿಂತಕಿ ರಶ್ಮಿ ಸಾಮಂತ್ ಅವರು ಮಾಡಿರುವ ಟ್ವೀಟ್ ಸಂಚಲನ ಸೃಷ್ಟಿಸಿದೆ. ಈ ಘಟನೆ ಸಂಬAಧ ಪ್ರಕರಣವನ್ನು ಕೇಂದ್ರದ ತನಿಖೆಗೆ ವಹಿಸಿ, ತನಿಖೆಯಲ್ಲಿ ಆರೋಪ ಸಾಬೀತಾದರೆ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಲಿ ಎಂದು ಬಿಜೆಪಿ ಶಾಸಕ ಯಶ್‌ಪಾಲ್ ಸುವರ್ಣ ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್‌ಪಾಲ್ ಸುವರ್ಣ, ಸಿದ್ದರಾಮಯ್ಯ ಪ್ರಕರಣವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಕೆಲಸ ಸಿದ್ದರಾಮಯ್ಯ ಮಾಡಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಬೇಕಿತ್ತು. ಇಲ್ಲಿ ಬಡ ಹಿಂದೂ ಯುವತಿಯರಿಗೆ ಅನ್ಯಾಯವಾಗಿದೆ. ಮುಸ್ಲಿಂ ಯುವತಿಯರು ತಪ್ಪು ಒಪ್ಪಿಕೊಂಡಿದ್ದಾರೆ. ಕಾಲೇಜು ಕೂಡ ಅವರನ್ನು ಅಮಾನತುಗೊಳಿಸಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ರಾಜ್ಯ ಮತ್ತು ಕೇಂದ್ರ ಜಂಟಿ ತನಿಖೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಜುಲೈ 18ರಂದು ಉಡುಪಿಯ ಪ್ರತಿಷ್ಠಿತ ನೇತ್ರ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ನಡುವೆ ಆಂತರಿಕ ಗಲಾಟೆಯಾಗಿತ್ತು. ಕಾಲೇಜಿನ ಮೂವರು ಮುಸ್ಲಿಂ ಯುವತಿಯರು ಹಿಂದೂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿಕೊಂಡು ವಿಡಿಯೋ ಮಾಡಿರುವ ಸುದ್ದಿ ಬಹಿರಂಗಗೊAಡಿತ್ತು. ವಿಷಯ ಆಡಳಿತ ಮಂಡಳಿಯ ಗಮನಕ್ಕೆ ಬಂದಾಗ, ವಿಚಾರಣೆ ನಡೆಸಿ. ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದ್ದರು. ಯಾವ ಉದ್ದೇಶಕ್ಕೆ ವಿಡಿಯೋ ಚಿತ್ರೀಕರಣ ಮಾಡಿದ್ದರು? ಎಂಬ ಬಗ್ಗೆ ಯಾವ ವಿಚಾರವೂ ಬೆಳಕಿಗೆ ಬಂದಿರಲಿಲ್ಲ. ವಿಷಯ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಜುಲೈ 20 ರಂದು ಕಾಲೇಜಿಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.