ಉಡುಪಿ: ನಮ್ಮ ಭೂಮಿ, ನಮ್ಮ ಸಂಸೃತಿಯನ್ನು ಬಿಟ್ಟು ಬೇರೆ ಬೇರೆ ಕಾರಣಗಳಿಂದಾಗಿ ದೂರದ ದೇಶಗಳಿಗೆ ಹೋಗಿ ದುಡಿಯುವುದರಿಂದ ನಾವು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಅದರ ಬದಲಾಗಿ ಈ ನೆಲದ ಹಿರಿಮೆ ಗರಿಮೆಯನ್ನು ಅರ್ಥಮಾಡಿಕೊಂಡು ನಮ್ಮ ವಿದ್ಯೆ, ಬುದ್ಧಿ, ಚತುರತೆಯನ್ನು ಈ ದೇಶಕ್ಕಾಗಿಯೇ ಮೀಸಲಾಗಿಡೋಣ, ಆ ಮೂಲಕ ಭಾರತೀಯತೆಯನ್ನು ಸಶಕ್ತಗೊಳಿಸೋಣ ಎಂದು ಅದಮಾರು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.
ಅವರು ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್‌ಪಾಲ್ ಸುವರ್ಣ ಮುಖ್ಯ ಅತಿಥಿಗಳಾಗಿ ಮಾತನಾಡಿ, ತಮ್ಮ ಬದುಕಿನಲ್ಲಿ ಪೂರ್ಣಪ್ರಜ್ಞ ಸಂಸ್ಥೆಯ ಪಾತ್ರವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾ ನಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರಿಗೆ ಮಾದರಿಯಾಗುವಂತೆ ರೂಪಿಸಿಕೊಳ್ಳುವ ಮೂಲಕ, ನಾವು ನಮ್ಮ ಸುತ್ತಮುತ್ತಲಿನ ಪರಿಸರ, ರಾಜ್ಯ , ರಾಷ್ಟ್ರದ ಉದ್ಧಾರಕ್ಕೆ ಕಾರಣರಾಗಬೇಕಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ಬ್ಯಾಂಕ್ ಉಪ ಮಹಾಪ್ರಬಂಧಕರಾದ ರಾಜಗೋಪಾಲ್ ಬಿ. ಮಾತನಾಡಿ,ವಿದ್ಯಾರ್ಥಿ ಜೀವನದ ಮಹತ್ವವನ್ನು ತಿಳಿಸುತ್ತಾ ಶುಭ ಹಾರೈಸಿದರು. ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸಿ.ಎ. ಟಿ. ಪ್ರಶಾಂತ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಯಶ್‌ಪಾಲ್ ಸುವರ್ಣ ಅವರನ್ನು ಶ್ರೀಪಾದರು ಸನ್ಮಾನಿಸಿ ಅಭಿನಂದಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಡಾ. ಜಿ.ಎಸ್.ಚಂದ್ರಶೇಖರ್, ಪ್ರಾಂಶುಪಾಲ ಡಾ.ಸುಕನ್ಯಾ ಮೇರಿ.ಜೆ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಪ್ರೊ.. ಚಂದ್ರಕಾAತ್ ಭಟ್, ಶ್ರೀಮತಿ ಲವಿಟಾ ಡಿಸೋಜಾ, ಉಪ ಪ್ರಾಂಶುಪಾಲ ವಿನಾಯಕ್ ಪೈ, ವಿದ್ಯಾರ್ಥಿ ಪ್ರತಿನಿಧಿಗಳಾದ ರಮೇಶ್ ಕಾಮತ್, ಕುಮಾರೇಶ್, ಕು. ನಮ್ರತಾ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿ.ಎ. ಟಿ. ಪ್ರಶಾಂತ್ ಹೊಳ್ಳ ಸ್ವಾಗತಿಸಿ, ಕು.ಸಿಂಧೂ ವಂದಿಸಿದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.