ಉಡುಪಿ: ಬರೋಬ್ಬರಿ 60 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚುತ್ತಿದ್ದ ನಟೋರಿಯಸ್ ಕಳ್ಳನನ್ನು ಉಡುಪಿ ಪೊಲೀಸರು ಬಂಧಿಸಿದ್ದು ಆತನಿಂದ 500 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿಯ ಕುಂಜಿಬೆಟ್ಟು ಲಾಲಾಲಜಪತ್ ರಾಯ್ ಮಾರ್ಗದ ಮನೆಯೊಂದರಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದ ಕಳವು ಪ್ರಕರಣದ ತನಿಖೆಯ ಜಾಡುಹಿಡಿದ ಉಡುಪಿ ನಗರ ಠಾಣಾ ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದಾರೆ.
ಈ ಕುರಿತಂತೆ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರು ಉತ್ತರಹಳ್ಳಿಯ ಭುವನೇಶ್ವರಿ ನಗರದ ನಿವಾಸಿ ಮಂಜುನಾಥ ಯಾನೆ ಕಲ್ಕೆರೆ ಮಂಜ(43) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನಿಂದ 31,55,930ರೂ. ಮೌಲ್ಯದ 530ಗ್ರಾಂ ಚಿನ್ನಾಭರಣ ಹಾಗೂ 15,12,000ರೂ. ಮೌಲ್ಯದ 16.80 ಕೆ.ಜಿ ಬೆಳ್ಳಿಯ ಆಭರಣಗಳನ್ನು ಮತ್ತು ಕಳವು ಮಾಡಲು ಬಳಸಿದ 2.50ಲಕ್ಷ ರೂ.ಮೌಲ್ಯದ ಕಾರು, ನಕಲಿ ನಂಬರ್ ಪ್ಲೇಟ್ಗಳು ಮತ್ತು ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅ.8ರಂದು ರಾತ್ರಿ ಕುಂಜಿಬೆಟ್ಟುವಿನ ಅಮ್ಮುಂಜೆ ವಿಟ್ಠಲದಾಸ್ ನಾಯಕ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು, ಒಟ್ಟು 73,06,800ರೂಪಾಯಿ ಮೌಲ್ಯದ 1,882 ಗ್ರಾಂ ತೂಕದ ಚಿನ್ನಾಭರಣ ಹಾಗೂ 7.450 ಕೆ.ಜಿ ತೂಕದ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ, ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ ಬಿ.ಇ. ಹಾಗೂ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಅದರಂತೆ ತಂಡವು ಅ.31ರ ಮಂಗಳವಾರ ಆರೋಪಿ ಮಂಜುನಾಥನನ್ನು ಉಡುಪಿ ಉದ್ಯಾವರ ಸಮೀಪದ ಬಲಾಯಿ ಪಾದೆ ಬಳಿ ಕಾರು ಸಹಿತ ವಶಕ್ಕೆ ಪಡೆದುಕೊಂಡಿತ್ತು.ಇತರೇ ಪ್ರಕರಣಗಳಲ್ಲಿ ಕಳವುಗೈದ ಸೊತ್ತುಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ ಎಂದು ಹೆಚ್ಚುವರಿ ಎಸ್ಪಿ ಮಾಹಿತಿ ನೀಡಿದರು.
ಆರೋಪಿಯು ಬ್ರಹ್ಮಾವರ, ತರಿಕೆರೆ, ಅರಸಿಕೇರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡಾ ಭಾಗಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಟುವರಿ ಎಸ್ಪಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಡಿವೈಎಸ್ಪಿ ದಿನಕರ ಪಿ.ಕೆ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್. ಉಪಸ್ಥಿತರಿದ್ದರು.