ಲಕ್ನೋ : ಪಾತಕಿಗಳನ್ನ ಮಟ್ಟಹಾಕುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೋರಾಟ ಮುಂದುವರಿದಿದೆ. ಅತೀಕ್ ಅಹ್ಮದ್‌ನ ಪುತ್ರನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಬಳಿಕ ಉತ್ತರ ಪ್ರದೇಶ ಎಸ್‌ಟಿಎಫ್ ಗುರುವಾರ ಮತ್ತೊಂದು ದೊಡ್ಡ ಎನ್‌ಕೌಂಟರ್ ನಡೆಸಿದೆ. ಗುರುವಾರ ಸಂಜೆಯ ವೇಳೆಗ ಪಾತಕಿ ಅನಿಲ್ ದುಜಾನಾನ ಹೆಡೆಮುರಿ ಕಟ್ಟಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಗ್ಯಾಂಗ್‌ಸ್ಟರ್ ಅನಿಲ್ ದುಜಾನಾ ಉತ್ತರ ಪ್ರದೇಶದ ಗೌತಮ ಬುದ್ಧ ಜಿಲ್ಲೆಯ ಬಾದ್ಲಪುರ ಪೊಲೀಸ್ ಸ್ಟೇಷನ್‌ನ ದುಜಾನಾ ಗ್ರಾಮದ ವ್ಯಕ್ತಿ. ಪೊಲೀಸರ ಗುಂಡಿಗೆ ಬಲಿಯಾದ ದುಜಾನಾ ಪಶ್ಚಿಮ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಜನರ ಸುಲಿಗೆ ಮಾಡುವುದು ಮಾತ್ರವಲ್ಲದೆ, ಸಂಘಟಿತ ಕ್ರಿಮಿನಲ್ ಗ್ಯಾಂಗ್ ಕೂಡ ನಡೆಸುತ್ತಿದ್ದ. ಅತೀಕ್ ಅಹ್ಮದ್‌ನ ಪುತ್ರ ಅಸಾದ್‌ನನ್ನು ಜಾನ್ಸಿಯಲ್ಲಿ ಎನ್‌ಕೌಂಟರ್‌ನಲ್ಲಿ ಬಲಿ ಪಡೆದುಕೊಂಡ ಬಳಿಕ ಉತ್ತರ ಪ್ರದೇಶ ಎಸ್‌ಟಿಎಫ್‌ನ 2ನೇ ದೊಡ್ಡ ಬೇಟೆ ಇದಾಗಿದೆ. ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಅಸಾದ್ ಪ್ರಮುಖ ಆರೋಪಿಯಾಗಿದ್ದ. ಹಾಡಹಗಲಲ್ಲೇ ಉಮೇಶ್ ಪಾಲ್ ಮೇಲೆ ಅಸಾದ್ ಗುಂಡು ಹಾರಿಸಿ ಕೊಂದಿದ್ದ.
ಅನಿಲ್ ದುಜಾನಾ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 62 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 18 ಕೊಲೆಗಳು, ಸುಲಿಗೆ, ದರೋಡೆ, ಭೂಕಬಳಿಕೆ, ತೆರವು ಸೇರಿದಂತೆ ಪ್ರಮುಖ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ ಮಾಫಿಯಾ ಮತ್ತು ದರೋಡೆಕೋರರ ವಿರುದ್ಧದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅನಿಲ್ ದುಜಾನಾ ಎನ್‌ಕೌಂಟರ್ ನಡೆದಿದೆ.