ಬೆಂಗಳೂರು: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಎಸಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಿಗೆ ಸಿಸಿಬಿ ಮನವಿ ಮಾಡಿದ್ದರು.

ಕೋರ್ಟ್ನಲ್ಲಿ ಜಡ್ಜ್ ಎದುರು ಚೈತ್ರಾ ಕುಂದಾಪುರ ಕಣ್ಣೀರು ಹಾಕಿದ್ದು, ಮೊದಲು ಬಂಧಿಸಿದ ಉಡುಪಿ ಪೊಲೀಸರು, ಸ್ವಲ್ಪ ಕಿರಿಕಿರಿ ಮಾಡಿದರೆ. ಸಿಸಿಬಿ ಪೊಲೀಸರು ಕೈ ಎಳೆದಾಡಿ ನೋವು ಮಾಡಿದ್ದಾರೆ. ನನ್ನ ತಾಯಿ ಜತೆ ಮಾತನಾಡಲು ಸಹ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮೇಲೆ ಯಾವ ಕೇಸ್ ಇದೆ ಎಂದು ನನಗೆ ಗೊತ್ತಿಲ್ಲ ಎಂದು ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ನಲ್ಲಿ ಚೈತ್ರಾ ಹೇಳಿದ್ದಾರೆ.

ಬಂಧನ ಕುರಿತು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆಯೇ ಎಂದು ತನಿಖಾಧಿಕಾರಿ ರೀನಾ ಸುವರ್ಣಾಗೆ ನ್ಯಾಯಾಧೀಶರು ಪ್ರಶ್ನೆ ಮಾಡಿದ್ದು, ಈ ವೇಳೆ ಕುಟುಂಬದವರಿಗೆ ಮಾಹಿತಿ ಇಲ್ಲವೆಂದು ಚೈತ್ರಾ ಹೇಳಿದ್ದಾರೆ. ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ನನ್ನ ವಿರುದ್ಧದ ದಾಖಲಿಸಿರುವ ದೂರಿನ ಸೆಕ್ಷನ್ ಮಾತ್ರ ಹೇಳಿದ್ದಾರೆ. ಯಾವ ದೂರು, ಯಾರು ದೂರು ನೀಡಿದರು ಎಂದು ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಆರೋಪಿಗಳ ಜತೆ ವಕೀಲರು ಅರ್ಧ ಗಂಟೆ ಮಾತನಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದು, ಕೋರ್ಟ್ ಆವರಣದಲ್ಲೇ ಆರೋಪಿಗಳಿಗೆ ವಕೀಲರೊಂದಿಗೆ ಮಾತನಾಡಲು ನ್ಯಾಯಾಲಯ ಅವಕಾಶ ನೀಡಿದೆ.

ಆರೋಪಿಗಳಿಗೆ ಯಾವುದೇ ನೋಟಿಸ್ ನೀಡದೆ ಬಂಧಿಸಿದ್ದಾರೆ ಎಂದು ವಿಚಾರಣೆ ವೇಳೆ ಕೋರ್ಟ್‌ಗೆ ಆರೋಪಿಗಳ ಪರ ವಕೀಲರು ಹೇಳಿದ್ದಾರೆ. ಸಿಆರ್‌ಪಿಸಿ 41ರಡಿ ನೋಟಿಸ್ ನೀಡಬೇಕಿತ್ತು. ಸಿಸಿಬಿ ಪೊಲೀಸರು ನಿಯಮ ಉಲ್ಲಂಘಿಸಿದ್ದಾರೆ ಎಂದಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದರಿಂದ ನೋಟಿಸ್ ನೀಡಿಲ್ಲ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ಹೇಳಿದ್ದಾರೆ.

ಮೂರನೇ ಆರೋಪಿ ನಾಪತ್ತೆ:
ಪ್ರಕರಣದ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿಯ ಹಾಲಸ್ವಾಮಿ ಮಠದ ಶ್ರೀ, ಎಫ್ಐಆರ್ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ.


