ಬೆಂಗಳೂರು:ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಅಧ್ಯಕ್ಷ ಹಾಗೂ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಅವರನ್ನೊಳಗೊಂಡ ಆಯೋಗವು ಆರನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಿದೆ.
ಹಲವು ಇಲಾಖೆಗಳಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು ಹಾಗೂ ಇತರೆ ಕ್ಲರಿಕಲ್ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಆಯೋಗ ಹೇಳಿದೆ. ಎಚ್‌ಆರ್‌ಎಂಎಸ್, ಖಜಾನೆ 2 ಇ ಆಫೀಸ್, ಇ ಪಾರ್ ಮತ್ತು ಇ-ಸರ್ವೀಸ್ ರಿಜಿಸ್ಟರ್‌ನ ಪರಿಚಯ ಮತ್ತು ಅಳವಡಿಕೆಯೊಂದಿಗೆ ಕ್ಲರಿಕಲ್ ಕೆಲಸವು ಗಣನೀಯವಾಗಿ ಕಡಿಮೆಯಾಗುತ್ತದೆ. ಹೆಚ್ಚಿನ ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಹುದ್ದೆಗಳನ್ನು ತರ್ಕಬದ್ಧಗೊಳಿಸುವುದು ಅಥವಾ ತಾಂತ್ರಿಕ ಹುದ್ದೆಗಳಿಗೆ ಪರಿವರ್ತಿಸುವುದನ್ನು ಸರ್ಕಾರ ಪರಿಗಣಿಸಬಹುದು ಎಂದು ಅದು ಹೇಳಿದೆ. ಏಳು ಇಲಾಖೆಗಳನ್ನು ಅಧ್ಯಯನ ಮಾಡಿದ ಆಯೋಗವು ಹಲವು ಕಚೇರಿಗಳಲ್ಲಿ ಇ ಆಫೀಸ್ ಬಳಕೆಯಾಗುತ್ತಿಲ್ಲ ಎಂದು ಹೇಳಿದೆ. ಜಿಲ್ಲೆ ಮತ್ತು ತಾಲೂಕು ಕಚೇರಿಗಳು ಈಗಾಗಲೇ ಕಂಪ್ಯೂಟರ್‌ಗಳು, ಸ್ಕ್ಯಾನರ್‌ಗಳು, ಪ್ರಿಂಟರ್‌ಗಳು ಮತ್ತು ಯುಪಿಎಸ್‌ಗಳನ್ನು ಹೊಂದಿದ್ದು, ಇವುಗಳೊಂದಿಗೆ ಪತ್ರವ್ಯವಹಾರಕ್ಕಾಗಿ ಮತ್ತು ಕಡತಗಳನ್ನು ಕಚೇರಿಗಳಿಗೆ ಕಳುಹಿಸಲು ಇ-ಆಪೀಸ್ ಅನ್ನು ಬಳಸಲು ಪ್ರಾರಂಭಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.