ಕಾರ್ಕಳ:ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಬೊಂಡುಕುಮೇರಿ ನಿವಾಸಿ ಮಂಜುನಾಥ ನಾಯ್ಕ ಹಾಗೂ ಶಾಂತಿ ಎಂಬ ದಂಪತಿಯ 23 ಹರೆಯದ ಮಗಳು ಮಂಜುಳಾ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮಾಡಿಕೊಂಡು ಹೆತ್ತವರನ್ನು ನೋಡಿಕೊಳ್ಳಬೇಕಿದ್ದವಳು ಇಂದು ತಂದೆತಾಯಿಯರ ಆರೈಕೆಯಲ್ಲಿ ಆಸ್ಪತ್ರೆಯಲ್ಲಿ ಬದುಕಿಗಾಗಿ ಹೋರಾಟ ನಡೆಸುವಂತಾಗಿದೆ.
ಮುಂದಿನ ಭವಿಷ್ಯದ ಕನಸನ್ನು ಹೊತ್ತುಕೊಂಡು ಜೀವನ ನಡೆಸಬೇಕಿದ್ದ ಮಂಜುಳಾ ತನ್ನೆರಡೂ ಕಿಡ್ನಿ ಕಳೆದುಕೊಂಡು ಅಕ್ಷರಶಃ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾಳೆ. ಮಂಜುನಾಥ ನಾಯ್ಕ್ ಅವರ ಇಬ್ಬರು ಮಕ್ಕಳ ಪೈಕಿ ಹಿರಿಯವಳಾದ ಮಂಜುಳಾ ಶಾಲೆಗೆ ಹೋಗುವ ವಯಸ್ಸಿನಲ್ಲೇ ವಿಧಿಯ ಲೀಲೆಗೆ ಅನಾರೋಗ್ಯಕ್ಕೆ ತುತ್ತಾಗಿ ಬಳಿಕ ಕ್ರಮೇಣ ಕಿಡ್ನಿ ಸಮಸ್ಯೆಗೆ ಒಳಗಾಗಿ ಕಳೆದ 7 ವರ್ಷಗಳಿಂದ ನಿರಂತರವಾಗಿ ಡಯಾಲಿಸಿಸ್ ಮಾಡಿಕೊಂಡು ಬರುವಂತಾಯಿತು. ಮಂಜುನಾಥ ನಾಯ್ಕ ಕೂಲಿ ಕೆಲಸ ಮಾಡಿಕೊಂಡು ಸಂಸಾರದ ಹೊಣೆ ಹೊತ್ತರೆ ಪತ್ನಿ ಶಾಂತಿ ಬೀಡಿ ಕಟ್ಟಿ ಸಂಸಾರದ ನಿರ್ವಹಣೆ ಜತೆಗೆ ಮಗಳ ಆಸ್ಪತ್ರೆಯ ಖರ್ಚು ಹಾಗೂ ಮಗನ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವ ಮೂಲಕ ಪತಿಗೆ ಹೆಗಲಾಗಿದ್ದಾರೆ.
ತಂದೆತಾಯಿಯ ಜವಾಬ್ದಾರಿ ಹೊರಬೇಕಿದ್ದ ಮಗಳು ಮಂಜುಳಾ ಇಂದು ತನ್ನ ಎರಡೂ ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ದಯನೀಯ ಸ್ಥಿತಿಯಲ್ಲಿದ್ದಾಳೆ. ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಮಂಜುನಾಥ ನಾಯ್ಕ್ ಸಹೃದಯಿ ದಾನಿಗಳ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿAದ ಮಂಜುಳಾ ಆರೋಗ್ಯ ತೀರಾ ಹದಗೆಟ್ಟಿದ್ದು ಆಕೆಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಲಾಗುತ್ತಿದ್ದು ಇದಕ್ಕಾಗಿ ಪ್ರತೀನಿತ್ಯ ಸಾವಿರಾರು ರೂಪಾಯಿ ಆಸ್ಪತ್ರೆಯ ವೆಚ್ಚ ಭರಿಸಬೇಕಿದೆ. ಆದರೆ ಮಂಜುಳಾ ಕಿಡ್ನಿಗಳು ವೈಫಲ್ಯಗೊಂಡ ಕಾರಣದಿಂದ ಆಕೆಗೆ ಕಿಡ್ನಿ ಕಸಿ ಮಾಡಬೇಕಿರುವುದರಿಂದ ಅದಕ್ಕಾಗಿ ಸುಮಾರು 15 ಲಕ್ಷ ವೆಚ್ಚ ತಗಲುತ್ತದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದು ಇಷ್ಟೊಂದು ಹಣ ಹೊಂದಿಸುವ ಶಕ್ತಿಯಿಲ್ಲದೇ ಮಂಜುನಾಥ ನಾಯ್ಕ ತನ್ನ ಮಗಳನ್ನು ಬದುಕಿಸಲು ದಾನಿಗಳ ಸಹಕಾರ ಯಾಚಿಸಿದ್ದಾರೆ.
ಆದ್ದರಿಂದ ಸಹೃದಯಿ ದಾನಿಗಳು ತಮ್ಮ ನೆರವಿನ ಹಸ್ತದ ಮೂಲಕ ಬಾಳಿ ಬದುಕಬೇಕಿರುವ ಮಂಜುಳಾ ಅವರ ಚಿಕಿತ್ಸೆಗೆ ನೆರವಾಗಬೇಕೆಂದು ಆಕೆಯ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ನೆರವಿನ ಸಹಾಯಹಸ್ತ ಮಾಡುವವರು ಅಜೆಕಾರು ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ 520101229472695, IFSC code: UBIN0900982 G.Pay: 8904680469(ಮನೋಜ್), ಮಾಹಿತಿಗಾಗಿ 9535823927 ಸಂಪರ್ಕಿಸಬಹುದು