ಕಾರ್ಕಳ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಖ್ಯಾತ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಮಂಗಳವಾರ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಕರ್ವಾಲು ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಷ್ಣುಮೂರ್ತಿ ದೇವರಿಗೆ ಹಾಗೂ ಸ್ಥಳದಲ್ಲಿನ ಮೂಲ ನಾಗದೇವರಿಗೆ ತನು ತಂಬಿಲ ಸೇವೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ರವಿಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ಬಳಿಕ ಮಾಧ್ಯಮದವರ ಜತೆ ಮಾತನಾಡಿದ ರವಿಶಾಸ್ತ್ರಿ,ಭಾರತ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತ ಕುರಿತು ಪ್ರತಿಕ್ರಿಯಿಸಿ, ಪಂದ್ಯಾವಳಿಯಲ್ಲಿ ಸೋಲು ಗೆಲುವು ಇದ್ದಿದ್ದೆ, ಭಾರತ ತಂಡ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು ಅತ್ಯುತ್ತಮ ಸಾಧನೆ ಮಾಡುತ್ತಿದೆ. ಈಗಾಗಲೇ ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಟೆಸ್ಟ್ ಸರಣಿ ಕೈಚೆಲ್ಲಿದರೂ ರೋಹಿತ್ ಶರ್ಮಾ ಪಡೆ ಅತ್ಯುತ್ತಮ ಸಾಧನೆ ಮಾಡಿದೆ, ಪ್ರಮುಖವಾಗಿ ರವೀಂದ್ರ ಜಡೇಜ, ಆರ್.ಅಶ್ವಿನ್ ಸೇರಿದಂತೆ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಯುವ ಬ್ಯಾಟರ್ ಗಳಾದ ವೃದ್ದಿಮಾನ್ ಸಾಹ, ಶುಭಮನ್ ಗಿಲ್,ಕೆ.ಎಲ್ ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದು ಮುಂದಿನ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.
ರಿಷಭ್ ಪಂತ್ ತಂಡ ಸೇರ್ಪಡೆ ಕುರಿತು ಅವರು ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ, ಆದ್ದರಿಂದ ಮುಂದಿನ ವಿಶ್ವಕಪ್ ಗೆ ಲಭ್ಯರಾಗುತ್ತಿಲ್ಲ,ಕೆಲವೇ ದಿನಗಳಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು ಇದರಲ್ಲಿ ಉತ್ತಮ ಸಾಧನೆ ಮಾಡುವ ಉದಯೋನ್ಮುಖ ಆಟಗಾರರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗಲಿದೆ ಎಂದರು. ರಿಷಭ್ ಪಂತ್ ಕ್ರಿಕೆಟ್ ಗೆ ಮರಳಲು ಭಾರತ ದೇಶವಲ್ಲ ಇಡೀ ಜಗತ್ತು ಕಾಯುತ್ತಿದೆ ಆದರೆ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆಯಾಗಿಲ್ಲ ಆದ್ದರಿಂದ ಮುಂದಿನ ವಿಶ್ವಕಪ್ ಗೆ ಲಭ್ಯರಾಗುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ರವಿಶಾಸ್ತ್ರಿ ಸಂಬಂಧಿಕರಾದ ಸಂತೋಷ್ ಶಾಸ್ತ್ರಿ ಹಾಗೂ ಕವಿತಾ ಶಾಸ್ತ್ರಿ, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತ ಪಟ್ಟಾಭಿರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ,ದೇವಸ್ಥಾನ ಅರ್ಚಕ ಅಶೋಕ ಕಾರಂತ್, ದೇವಸ್ಥಾನದ ತಂತ್ರಿಗಳಾದ ನರಸಿಂಹ ತಂತ್ರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಹೆಗ್ಡೆ, ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಯುವರಾಜ ನಾಯಕ್, ಕರ್ನಾಟಕ ಬ್ಯಾಂಕ್ ನಿವೃತ್ತ ಜನರಲ್ ಮ್ಯಾನೇಜರ್ ನಾಗರಾಜ ರಾವ್,ಚಲನಚಿತ್ರ ನಿರ್ದೇಶಕ ಸಂದೀಪ್ ಶೆಟ್ಟಿ, ನವೀನ್ ಕುಮಾರ್, ಸುಧೀರ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು