ಕಾರ್ಕಳ: ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸದಸ್ಯರ ಅಡ್ಡಮತದಾನದ ನಡುವೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುನಿಲ್ ಹೆಗ್ಡೆ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
ಒಟ್ಟು 12 ಸದಸ್ಯಬಲದ ಎರ್ಲಪಾಡಿ ಪಂಚಾಯಿತಿಯಲ್ಲಿ 9 ಬಿಜೆಪಿ ಬೆಂಬಲಿತ ಹಾಗೂ 3 ಜನ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ (ಮಹಿಳೆ) ಮೀಸಲಾತಿ ಪ್ರಕಟವಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ರೇಖಾ ಆಚಾರ್ಯ ಅವಿರೋಧವಾಗಿ ಆಯ್ಕೆಯಾದರೆ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಸುನಿಲ್ ಹೆಗ್ಡೆ ಹಾಗೂ ಪಕ್ಷೇತರರಾಗಿ ಹರಿಪ್ರಸಾದ್ ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿ ಬೆಂಬಲಿತ ಸುನಿಲ್ ಹೆಗ್ಡೆಗೆ 7 ಮತಗಳು ಹಾಗೂ ಹರಿಪ್ರಸಾದ್ ಅವರಿಗೆ 5 ಮತಗಳು ಚಲಾವಣೆಯಾಗಿವೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಮತದಾನ ಪ್ರಕ್ರಿಯೆಯಲ್ಲಿ 9 ಜನ ಬಿಜೆಪಿ ಬೆಂಬಲಿತ ಸದಸ್ಯರ ಪೈಕಿ ಇಬ್ಬರು ಸದಸ್ಯರು ಪಕ್ಷೇತರ ಬಣದ ಹರಿಪ್ರಸಾದ್ ಗೆ ಮತ ಚಲಾವಣೆ ಮಾಡಿದ ಪರಿಣಾಮವಾಗಿ ಹರಿಪ್ರಸಾದ್ 5 ಮತಗಳನ್ನು ಪಡೆದುಕೊಂಡರು.
ಕುಕ್ಕುಂದೂರಿನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಿಂದ ಅಡ್ಡಮತದಾನವಾಗಿದ್ದು ಇದೀಗ ಎರ್ಲಪಾಡಿಯಲ್ಲೂ ಮತ್ತೆ ಬಿಜೆಪಿ ಬೆಂಬಲಿತ ಬಂಡಾಯ ಸದಸ್ಯರು ಅಡ್ಡಮತದಾನ ಮಾಡಿದ್ದು, ಕೊನೆಗೂ ಬಿಜೆಪಿ ಕನಿಷ್ಠ ಅಂತರದ ಮೂಲಕ ಪ್ರಯಾಸದ ಗೆಲುವು ಪಡೆದಿದೆ.
ಕಾರ್ಕಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಬಿ.ವಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.




