ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ನಡೆಯುವ ಪ್ರೌಢಶಿಕ್ಷಣದ ಅಂತಿಮ ಹಾಗೂ ಪ್ರಮುಖ ಪರೀಕ್ಷೆಯಾದ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆಯಲ್ಲಿ ಯಾವುದೇ ನಕಲು ಹಾಗೂ ಅಕ್ರಮಗಳು ನಡೆಯದಂತೆ ಜಾಗ್ರತೆವಹಿಸುವ ದೃಷ್ಟಿಯಿಂದ ಡ್ರೋನ್ ಬಳಸಿ ಕಣ್ಗಾವಲು ವಹಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಶಿಕ್ಷಣ ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಗಟ್ಟುವ ಬಗ್ಗೆ ಇತ್ತೀಚೆಗೆ ಶಿಕ್ಷಣ ಇಲಾಖೆ ಸಭೆ ನಡೆಸಿತ್ತು. ಈ ವೇಳೆ ಡ್ರೋನ್ ಕ್ಯಾಮೆರಾ ಕಣ್ಗಾವಲು, ನೀಟ್ ಮಾದರಿಯಲ್ಲಿ ವಸ್ತ್ರ ಸಂಹಿತೆ ಜಾರಿ, ಪ್ರಶ್ನೆ ಪತ್ರಿಕೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಸೇರಿದಂತೆ ಸಲಹೆ ನೀಡಲಾಗಿತ್ತು. ಇದರ ಬೆನ್ನಲ್ಲಿಯೇ ಪರೀಕ್ಷೆ ಸಮಯದಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಯಲು ಇಲಾಖೆ ಚಿಂತನೆ ಮಾಡಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಶೇ.100% ಸಿಸಿ ಕ್ಯಾಮೆರಾ ಅಳವಡಿಕೆ ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಪರೀಕ್ಷಾ ಅಕ್ರಮ ತಡೆಯಲು ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.