ಬೆಂಗಳೂರು : ಇತ್ತೀಚೆಗೆ ಮುಗಿದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏ. 24ರಿಂದ ಆರಂಭವಾಗಲಿದ್ದು, ಮೇ ಎರಡನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
23 ದಿನದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶವನ್ನು ನೀಡಿದ ಮಾದರಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನೂ ತ್ವರಿತವಾಗಿ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದೆ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ 8.60 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನ ಏ.24 ರಿಂದ ಆರಂಭವಾಗಲಿದೆ. ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕಾದ ಶಿಕ್ಷಕರಿಗೆ ಈಗಾಗಲೇ ಮಂಡಳಿಯು ಆದೇಶ ಕಳುಹಿಸಿದ್ದು ಶೀಘ್ರವೇ ಈ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸುವ ಉದ್ದೇಶ ಹೊಂದಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನವು ಬೆಳಗಾವಿ ನಗರದ ಸೇಂಟ್ ಮೇರಿ ಇಂಗ್ಲೀಷ ಮಿಡಿಯಮ್ ಹೈಸ್ಕೂಲ್, ಸೇಂಟ್ ಪಾಲ್ ಇಂಗ್ಲೀಷ ಮಿಡಿಯಮ್ ಹೈಸ್ಕೂಲ್, ಸೇಂಟ್ ಝೇವಿಯರ್ ಇಂಗ್ಲೀಷ ಮಿಡಿಯಮ್ ಹೈಸ್ಕೂಲ್, ಸೇಂಟ್ ಆಂಥೋನಿ ಇಂಗ್ಲೀಷ ಮಿಡಿಯಮ್ ಹೈಸ್ಕೂಲ್, ಮಹಿಳಾ ವಿದ್ಯಾಲಯ ಮರಾಠಿ ಹೈಸ್ಕೂಲ್, ಉಷಾತಾಯಿ ಗೋಗಟೆ ಗಲ್ರ್ಸ ಹೈಸ್ಕೂಲ್, ಸಿದ್ದರಾಮೇಶ್ವರ ಪಿಯು ಕಾಲೇಜು ಶಿವಬಸವ ನಗರ ಹಾಗೂ ಕನ್ನಡ ಮಾಧ್ಯಮಿಕ ಶಾಲಾ ಹೈಸ್ಕೂಲ್ ಮಹಾಂತೇಶ ನಗರ ಈ 08 ಕೇಂದ್ರಗಳಲ್ಲಿ ಮೇ.5ರ ಬೆಳಿಗ್ಗೆ 6 ಗಂಟೆಯವರೆಗೆ ಮೌಲ್ಯಮಾಪನ ನಡೆಯಲಿದೆ.
ಈ ಕೇಂದ್ರಗಳ ಸುತ್ತಲು ಸಿಆರ್ಪಿಸಿ ಕಲಂ 144 ರ ಅಡಿ ನಿಷೇದಾಜ್ಞೆ ಹೊರಡಿಸಿ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಎಂ ಬಿ ಅವರು ಆದೇಶಿಸಿದ್ದಾರೆ. ನಿಷೇಧಾಜ್ಞೆಯ ಅವಧಿಯಲ್ಲಿ ಮೌಲ್ಯಮಾಪನ ಕೇಂದ್ರಗಳ ಸುತ್ತಲು 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಮೌಲ್ಯಮಾಪನ ಕೇಂದ್ರಗಳ ಸುತ್ತಲು ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗಧೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕೂ ಅಥವಾ ದೇಹಕ್ಕೆ ಅಪಾಯವನ್ನುಂಟು ಮಾಡಲು ಉಪಯೋಗಿಸಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಮೌಲ್ಯಮಾಪನ ಕೇಂದ್ರಗಳ ಸುತ್ತಲು ಕಲ್ಲುಗಳನ್ನು ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು ಯಾವುದೇ ದಹನಕಾರಿ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಲಾಗಿದೆ. ಹಾಗೂ ಮೌಲ್ಯಮಾಪನ ಕೇಂದ್ರಗಳ ಸುತ್ತಲು ಯಾವುದೇ ವ್ಯಕ್ತಿ ಸಾರ್ವಜನಿಕರಾಗಲಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ.