Share this news

ಬೆಂಗಳೂರು:  ಗರುಡಾ ಏರೋಸ್ಪೇಸ್‌  ಸಂಸ್ಥೆಯು ಸುಧಾರಿತ ಜಿಪಿಆರ್‌ ಆಧಾರಿತವಾಗಿ ಕಾರ್ಯನಿರ್ವಹಿಸಬಲ್ಲ ಮತ್ತು ಬೆಳೆಗಳ ರೋಗ ಪತ್ತೆ ಮಾಡುವ ಡ್ರೋನ್‌ ಅನ್ನು ಪರಿಚಯಿಸಿದ್ದು,  ಏರೋ ಇಂಡಿಯಾದಲ್ಲಿ ಕಿಸಾನ್‌ ಡ್ರೋನ್‌ ಅನ್ನು ಪ್ರದರ್ಶನಕ್ಕೆ ಇಡಲಾಗಿದೆ.  ಕೃಷಿ ಭೂಮಿಯನ್ನು ಇದು ಮ್ಯಾಪಿಂಗ್‌ ಮಾಡಲಿದೆ. ಈ ವೇಳೆ ಬೆಳೆಗೆ ರೋಗ ತಗುಲಿದ್ದರೆ ಅದನ್ನು ಸರ್ವೆ ಮಾಡಿ ಪತ್ತೆ ಮಾಡಲಿದೆ. 

ರೋಗಕ್ಕೆ ಯಾವ ಔಷಧ ಸಿಂಪಡಣೆ  ಮಾಡಬೇಕು ಎಂಬುದರ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಿದೆ. ನಂತರ ಔಷಧ ಸಿಂಪಡಣೆಗೆ ನಿರ್ದೇಶಿಸಿದರೆ, ರೋಗ ಕಾಣಿಸಿಕೊಂಡ ಭಾಗಕ್ಕೆ ತೆರಳಿ ಔಷಧ ಸಿಂಪಡಿಸಿ ವಾಪಾಸ್‌ ಆಗಲಿದೆ. ಈ ಸಂದರ್ಭದಲ್ಲಿ ಡ್ರೋನ್‌ ಎದುರಿಗೆ ಮರ, ವಿದ್ಯುತ್‌ ತಂತಿ  ಸೇರಿದಂತೆ ಹಾನಿ ಉಂಟು ಮಾಡುವ ಅಡೆತಡೆಗಳು ಎದುರಾದರೆ, ಅದನ್ನು ಸ್ವಯಂ ಚಾಲಿತವಾಗಿ ಪರಿಹಾರ ಮಾಡಿಕೊಂಡು ಮುಂದೆ ಸಾಗುವ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ.

ಗರುಡಾ ಏರೋಸ್ಪೇಸ್‌ ಸಂಸ್ಥೆ ಅಭಿವೃದ್ಧಿಪಡಿಸಿರುವ ಕಿಸಾನ್‌ ಡ್ರೋನ್‌ನ ಬೆಲೆ .5 ಲಕ್ಷ. ಆದರೆ, ಡ್ರೋನ್‌ ಖರೀದಿಸುವ ರೈತರಿಗೆ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಮೂಲಕ ವಾಪಾಸು ಕೊಡಿಸಲಿದೆ. ಕಿಸಾನ್‌ ಡ್ರೋನ್‌ ಒಮ್ಮೆಲೆ 10 ಲೀ. ಔಷಧ ಸಿಂಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಲಕ್ಷ ರೈತರಿಗೆ ಡ್ರೋನ್‌ ಪೈಲಟ್‌ ತರಬೇತಿ

ಡ್ರೋನ್‌ ಖರೀದಿಸಿದ ನಂತರ ಅದನ್ನು ಚಲಾಯಿಸಲು ಡ್ರೋನ್‌ ಪೈಲಟ್‌ ಪರವಾನಗಿ  ಪಡೆಯುವುದು ಕಡ್ಡಾಯವಾಗಿದೆ. ಆ ಸಮಸ್ಯೆ ಪರಿಹಾರಕ್ಕೆ ಸಂಸ್ಥೆಯಿಂದಲೇ 1 ಲಕ್ಷ ರೈತರಿಗೆ ಡ್ರೋನ್‌ ಪೈಲಟ್‌ ತರಬೇತಿ ನೀಡಲು ನಿರ್ಧರಿಸಿದೆ. ಚೆನ್ನೈನಲ್ಲಿನ  ಸಂಸ್ಥೆಯ ತರಬೇತಿ ಕೇಂದ್ರದಲ್ಲಿ 12 ದಿನಗಳ ತರಬೇತಿಯನ್ನು ನೀಡಲಾಗುತ್ತಿದೆ. ಅದಕ್ಕೆ .25 ಸಾವಿರ ಶುಲ್ಕ ತಗುಲಲಿದ್ದು, ಅದನ್ನೂ ಸಂಸ್ಥೆ ಭರಿಸಲು ತೀರ್ಮಾನಿಸಿದೆ. ಕಿಸಾನ್‌ ಡ್ರೋನ್‌ ಖರೀದಿ ಹಾಗೂ ಡ್ರೋನ್‌ ಪೈಲಟ್‌ ತರಬೇತಿಗೆ ಹೆಚ್ಚಿನ ಮಾಹಿತಿಗೆ ಸಂಸ್ಥೆ ವೆಬ್‌ಸೈಟ್‌ ಅಥವಾ ಮೊ.ಸಂ. 78248 33884ಗೆ ಕರೆ ಮಾಡಬಹುದಾಗಿದೆ.

Leave a Reply

Your email address will not be published. Required fields are marked *