ಮಂಗಳೂರು: ಕಟೀಲು ಬಳಿಯ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂದೆ, ಇದ್ದಕ್ಕಿದ್ದಂತೆ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ, ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಎಂ ಆರ್ ಪಿ ಎಲ್ ಕಂಪನಿಗೆ ಸೇರಿದಂತೆ ಬಸ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಇದನ್ನು ಕಂಡ ಚಾಲಕ ಬಸ್ ರಸ್ತೆಯ ಪಕ್ಕಕ್ಕೆ ಹಾಕಿ, ಅದರಲ್ಲಿದ್ದ ಇಬ್ಬರು ಸಿಬ್ಬಂದಿಗಳನ್ನು ಕೆಳಗಿಳಿಸಿದ ಪರಿಣಾಮ, ಮುಂದಾಗಲಿದ್ದ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.
ಸುರತ್ಕಲ್ ಸಮೀಪದ ಓ ಎಂ ಪಿ ಎಲ್ ಕಂಪನಿಗೆ ಸೇರಿದ ಬಸ್ ಇದಾಗಿದ್ದು, ಕಟೀಲು ರೂಟ್ ನಲ್ಲಿ ಮಧ್ಯಾಹ್ನ 2.45ರ ವೇಳೆಗೆ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿತ್ತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗಕ್ಕೆ ಬಂದಾಗ, ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಚಾಲಕ ಬಸ್ ನಿಲ್ಲಿಸಿ, ಅದರಲ್ಲಿದ್ದ ಇಬ್ಬರು ಓ ಎಂ ಪಿ ಎಲ್ ಕಂಪನಿ ಸಿಬ್ಬಂದಿಗಳನ್ನು ಕೆಳಗೆ ಇಳಿಸಿದ್ದಾರೆ.
ಬಸ್ಸಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಟ್ಯಾಂಕರ್ ಮೂಲಕ ನೀರು ತರಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.