Share this news

ಕಾರ್ಕಳ: ಪುರಸಭಾ ವ್ಯಾಪ್ತಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಟ್ಟಡಗಳಿಗೆ ತೆರಿಗೆ ನಿಗದಿಡಿಸಲು ಬಿಜೆಪಿ ಪುರಸಭಾ ಸದಸ್ಯರು ಶಿಕ್ಷಣ ಸಂಸ್ಥೆ ಲಕ್ಷಾಂತರ ರೂಪಾಯಿ ಹಣ ಪಡೆದು ಭ್ರಷ್ಟಾಚಾರ ಎಸಗಿದ್ದು,ಜತೆಗೆ ಪುರಸಭೆಗೆ ದ್ರೋಹ ಎಸಗಿದ್ದಾರೆ ಎಂದು ಪುರಸಭಾ ಸದಸ್ಯ ಶುಭದ್ ರಾವ್ ಗಂಭೀರ ಆರೋಪ ಮಾಡಿದ್ದಾರೆ.

ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ,ಭ್ರಷ್ಟಾಚಾರ ಎಸಗಿರುವ ಕುರಿತು ತನ್ನಲ್ಲಿ ದಾಖಲೆಯಿದ್ದು ಬಿಜೆಪಿ ಪುರಸಭಾ ಸದಸ್ಯರು ಮಾಡಿದ ಚಿಲ್ಲರೆ ಕೆಲಸಕ್ಕೆ ಕಾರ್ಕಳ ಶಾಸಕರಿಗೆ ನೈತಿಕತೆಯಿದ್ದರೆ ಅಂತಹ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿ, ಸಂಸ್ಥೆಗೆ ಹಣ ಹಿಂತಿರುಗಿಸಲು ಸೂಕ್ತ ಕ್ರಮ ಜರುಗಿಸಲಿ ಎಂದು ಶುಭದರಾವ್ ಸವಾಲು ಹಾಕಿದ್ದಾರೆ.

ಕಾರ್ಕಳದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಟ್ಟಡಕ್ಕೆ ತೆರಿಗೆ ಕಟ್ಟುವ ವಿಷಯದಲ್ಲಿ ಸಂಸ್ಥೆಯ ಮುಖ್ಯಸ್ಥರಿಂದ ತೆರಿಗೆ ಬಾಕಿ ಉಳಿಸಿದ ವಿಚಾರದಲ್ಲಿ ಮಾತುಕತೆ ನಡೆಸಿ ಮುಖ್ಯಸ್ಥರಿಂದ ಬರೋಬ್ಬರಿ 10 ಲಕ್ಷ ರೂಪಾಯಿ ವಸೂಲಿ ಮಾಡಿ ಅದರಲ್ಲಿ ಪುರಸಭೆಗೆ 4,25,671 ರೂಪಾಯಿ ತೆರಿಗೆ ಕಟ್ಟಿ ಪುರಸಭೆಗೆ ಪಾವತಿಸಿ ಉಳಿದ ಹಣವನ್ನು ಲಪಟಾಯಿಸಿ ಸಂಸ್ಥೆಗೆ ದ್ರೋಹ ಮಾಡಲಾಗಿದೆ, ಈ ಪ್ರಕರಣವು ಪುರಸಭೆಯ ದಾಖಲೆಗಳಿಂದ ಬಹಿರಂಗವಾಗಿದ್ದು,ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಶಾಸಕರಿಗೆ ಪೋಸ್ಟ್ ಮೂಲಕ ಕಳುಹಿಸಿ ಕೊಡಲಾಗುವುದು.ಅವರ ಪಕ್ಷದ ಸದಸ್ಯರೇ ಇಂತಹ ಭ್ರಷ್ಟಾಚಾರ ನಡೆಸಿರುವ ವಿಚಾರದಲ್ಲಿ ಅವರೇ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ನೈತಿಕತೆ ಉಳಿಸಿಕೊಳ್ಳಬೇಕಿದೆ ಎಂದರು.

ಅಲ್ಲದೇ ವಿಜಯೋತ್ಸವದ ಸಭೆಯಲ್ಲಿ ಪುರಸಭೆಯ ಲೈಸೆನ್ಸ್ ಗಾಗಿ ಇನ್ನೂರು ಮುನ್ನೂರು ರೂಪಾಯಿಗೆ ಕೈ ಚಾಚುವ ಚಿಲ್ಲರೆ ನಾಯಕ ಎಂದು ನನ್ನ ಮೇಲೆ ಆಧಾರ ರಹಿತ ಆರೋಪ ಮಾಡಿ ಅಪಮಾನ ಮಾಡಿದ್ದೀರಿ,ಇದೀಗ ನಿಮ್ಮ ಪಕ್ಷದ ಸದಸ್ಯರು ಮಾಡಿದ ಚಿಲ್ಲರೆ ಕೆಲಸಕ್ಕೆ ನೀವು ಸಮರ್ಥಿಸಿದರೆ ಕಾರ್ಕಳ ಕ್ಷೇತ್ರದ ಜನತೆ ನಿಮ್ಮನ್ನು ಚಿಲ್ಲರೆ ನಾಯಕ ಎಂದು ತಿಳಿದುಕೊಂಡತಾಗುತ್ತದೆ ಎಂದು ಎಂದು ಶುಭದ್ ರಾವ್ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *