ಕಾರ್ಕಳ: ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಸರ್ಕಾರದ ಆದೇಶದಂತೆ ಉಡುಪಿ ಜಿಲ್ಲಾಡಳಿತ ಕಠಿಣ ನಿರ್ಬಂಧ ಹೇರಿರುವುದನ್ನು ವಿರೋಧಿಸಿ ಗಣಿ ಹಾಗೂ ಲಾರಿ ಚಾಲಕ ಮಾಲಕರ ಸಂಘದ ವತಿಯಿಂದ ನಾಳೆಯಿಂದ (ಸೆ.28 ರಿಂದ) ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೋರಾಟ ಸಮಿತಿ ಅಧ್ಯಕ್ಷ ರವಿಶಂಕರ್ ಶೇರಿಗಾರ್ ಹೇಳಿದ್ದಾರೆ.
ಅವರು ಕಾರ್ಕಳ ಹೊಟೇಲ್ ಕಟೀಲ್ ಇಂಟರ್ ನ್ಯಾಶನಲ್ ನಲ್ಲಿ ಹೋರಾಟ ಸಮಿತಿಯ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಗಣಿಗಾರಿಕೆ ವಿಚಾರದಲ್ಲಿ ಸರ್ಕಾರದ ಅಸ್ಪಷ್ಟ ನೀತಿಯಿಂದ ಗಣಿಗಾರಿಕೆ ನಡೆಸುವ ಉದ್ಯಮಿಗಳು ಸಂಕಷ್ಟಕ್ಕೀಡಾಗಿದ್ದು ಇದನ್ನೇ ನಂಬಿದ ಕೂಲಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವಾರು ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು, ಕಟ್ಟಡಕಲ್ಲು, ಶಿಲೆಕಲ್ಲು, ಸೈಜುಕಲ್ಲು, ಮರಳು ಮುಂತಾದ ಕಟ್ಟಡ ಸಾಮಾಗ್ರಿ ಉದ್ಯಮ ನಡೆಯುತ್ತಿದ್ದು ಈ ಎಲ್ಲಾ ಉದ್ಯಮಗಳು ಈಗ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಬೀದಿ ಪಾಲಾಗಿದ್ದಾರೆ,ಇದರಿಂದ ಬ್ಯಾಂಕ್ ಸಾಲ ಕಟ್ಟಲಾಗದೇ ಉದ್ಯಮಿಗಳು ಪರದಾಡುತ್ತಿದ್ದಾರೆ.
ಕೆಂಪುಕಲ್ಲು, ಕಪ್ಪುಕಲ್ಲು ಬಗ್ಗೆ ಕೃಷಿ ಜಾಗದಲ್ಲಿ ತೆಗೆಯಲು ಸರಕಾರ ನೀಡುತ್ತಿದ್ದ 3A ಪರವಾನಗಿ ಐದಾರು ತಿಂಗಳ ಹಿಂದೆ ನಿಲ್ಲಿಸಿದ್ದು, ಉದ್ಯಮ ನಡೆಸಲು ಯಾವುದೇ ಪರವಾನಗಿ ನೀಡದ ಕಾರಣ, ಮಾನವೀಯತೆಯ ನೆಲೆಯಲ್ಲಿ ಯಾವುದೇ ಮನೆ ಕಟ್ಟುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಉದ್ಯಮ ಮತ್ತು ಲಾರಿಯಲ್ಲಿ ಕಟ್ಟಡ ಸಾಮಾಗ್ರಿಗಳ ಸಾಗಾಟ ನಡೆಸುತ್ತಿದ್ದು, ಕಳೆದ 15 ದಿವಸದಿಂದ ಈ ಎಲ್ಲಾ ಉದ್ಯಮದ ಲಾರಿ ಸಂಚಾರವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಲ್ಲಿಸಿದ್ದು,ಇದರಿಂದ ಗಣಿ ಮಾಲಿಕರು, ಲಾರಿ ಮಾಲಿಕರು ಕಾರ್ಮಿಕರು ಬೀದಿ ಪಾಲಾಗಿದ್ದಾರೆ, ಸರಕಾರಿ ಜಾಗದಲ್ಲಿ ಕಲ್ಲು ಮತ್ತು ಹೊಗೆ ಗಣಿಗಾರಿಕೆ ನಡೆಸಲು ಈಗ ಇರುವ ಡೀಮ್ಡ್ ಅರಣ್ಯ ನೀತಿಯಿಂದ ಯಾವುದೇ ಅವಕಾಶ ನೀಡುತ್ತಿಲ್ಲ.ತಕ್ಷಣವೇ ಡೀಮ್ಡ್ ಸಮಸ್ಯೆ ಬಗೆಹರಿಸಿ ಗಣಿಗಾರಿಕೆ ಕಾನೂನುಬದ್ದಗೊಳಿಸಬೇಕೆಂದು ಆಗ್ರಹಿಸಿದರು.
1996ನೇ ಇಸವಿಯಲ್ಲಿ ಆಗಿನ ಸರಕಾರ ಸ್ಥಿತಿಗತಿ ಪರಿಶೀಲನೆ ಮಾಡದೆ ನೇರವಾಗಿ ಖಾಲಿ ಇರುವ ಸರಕಾರಿ ಜಮೀನಿನ ಪಟ್ಟಿ ಕಂದಾಯ ಇಲಾಖೆಯಿಂದ ಪಡೆದು ಸುಪ್ರೀಂ ಕೋರ್ಟ್‌ಗೆ ಈ ಎಲ್ಲಾ ಜಾಗವನ್ನು ಅರಣ್ಯ ಇಲಾಖೆಗೆ ನೀಡಬೇಕೆಂದು ಅಫಿದಾವಿತ್ ಸಲ್ಲಿಸಿತ್ತು. ಮುಂದೆ ಇದನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಹಸಿರುಪೀಠ ಏಕಾಎಕಿ ಡೀಮ್ಡ್ ಅರಣ್ಯವೆಂದು ಘೋಷಣೆ ಮಾಡಿತು. ಅದೇ ಜಾಗದಲ್ಲಿ ಗಣಿಗಾರಿಕಾ ಪ್ರದೇಶ ಮತ್ತು ಜನವಸತಿ ಪ್ರದೇಶವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಮಾಡಿದ ತಪ್ಪಿನಿಂದ ಈ ಸಮಸ್ಯೆ ಉದ್ಭವಿಸಿದೆ. ಈ ಸಮಸ್ಯೆಗೆ ಹಲವಾರು ವರ್ಷಗಳಿಂದ ಕಟ್ಟಡ ಸಾಮಾಗ್ರಿ ಸಾಗಾಟಕ್ಕೆ ಯಾವುದೇ ರೀತಿಯ ಸಮರ್ಪಕವಾದ ಕಾನೂನು ವ್ಯವಸ್ಥೆಯಿಲ್ಲದ ಕಾರಣ ಒಂದು ರೀತಿಯ ಮಾನವೀಯತೆಯ ನೆಲೆಯಲ್ಲಿ ಸರಕಾರ ಅವಕಾಶ ಕಲ್ಪಿಸಿದ್ದರಿಂದ ಉದ್ಯಮ ನಡೆಯುತ್ತಿತ್ತು. ಈಗ ಒಂದೇ ಬಾರಿಗೆ ನಮ್ಮ ಮೇಲೆ ಹೆಚ್ಚಿನ ಒತ್ತಡ ಹೇರಿ ಯಾವುದೇ ಪರವಾನಗಿ ರಾಯಲ್ಟಿ ಬಿಲ್ ಇಲ್ಲದೇ ಸಾಗಾಟ ಮಾಡಬಾರದು ಎಂದು ಒತ್ತಡ ಹೇರಿರುವುದರಿಂದ ಮತ್ತು ಇನ್ನೂ ನಮಗೆ ಯಾವುದೇ ಪರವಾನಗಿ, ರಾಯಲ್ಲಿ ಬಿಲ್ ತೆಗೆಯಲು ಕಾನೂನಿನಲ್ಲಿ ಅವಕಾಶ ಕಲ್ಪಿಸದ ಕಾರಣ ನಮಗೆ ಉದ್ಯಮ ನಡೆಸಲಾಗುತ್ತಿಲ್ಲ ಎಂದರು.
ನಾವು ಯಾವುದೇ ಸಂದರ್ಭದಲ್ಲಿಯೂ ಅನಧಿಕೃತವಾಗಿ ಉದ್ಯಮ ನಡೆಸಲೇಬೇಕೆಂಬ ಭಾವನೆ ನಮ್ಮಲ್ಲಿ ಇಲ್ಲ. ಅಧಿಕೃತವಾಗಿ ಕಾನೂನು ಬದ್ಧವಾಗಿ ನ್ಯಾಯಯುತವಾಗಿ ವ್ಯವಹಾರ ನಡೆಸಬೇಕೆಂಬುದು ನಮ್ಮ ಬದ್ಧತೆ. ಆದರೆ ಸರಕಾರ ಕಾನೂನಿನಲ್ಲಿ ಯಾವುದೇ ರೀತಿಯ ಸಮರ್ಪಕವಾದ ವ್ಯವಸ್ಥೆ ಮಾಡದೇ ಏಕಾಏಕಿಯಾಗಿ ನಮ್ಮ ಮೇಲೆ ಸವಾರಿ ಮಾಡಿ ಕಾನೂನಿನ ಒತ್ತಡ ಹೇರಿರುವುದರಿಂದ ನಾವು ಇವತ್ತು ಯಾವುದೇ ಕಟ್ಟಡ ಸಾಮಾಗ್ರಿಗಳನ್ನು ಸಾಗಾಟ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಪರಿಣಾಮ ಲಾರಿ ಮಾಲಕರಿಗೆ, ಚಾಲಕನಿಗೆ, ಕಾರ್ಮಿಕರಿಗೆ, ಗಣಿ ಉದ್ಯಮಿಗಳಿಗೆ, ಜನಸಾಮಾನ್ಯರಿಗಾಗಿರುತ್ತದೆ. ಒಂದು ಹೊತ್ತಿನ ಊಟಕ್ಕೆ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ಲಾರಿ ಮಾಲೀಕರು ಕಟ್ಟಡ ಕಾರ್ಮಿಕರು ತಮ್ಮ ವಾಹನಕ್ಕಾಗಿ, ಮನೆಗಾಗಿ, ತಮ್ಮ ಜೀವನ ನಿರ್ವಹಣೆಗಾಗಿ ಸಾಲಗಳನ್ನು ಮಾಡಿ ಇದೇ ವ್ಯವಸ್ಥೆಯನ್ನು ನಂಬಿ ಬದುಕಿಕೊಂಡು ಬಂದಿದ್ದೇವೆ. ನಮಗೆ ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು, ಸೈಜುಕಲ್ಲು, ಕಟ್ಟಡ ಸಾಮಾಗ್ರಿ ಸಾಗಾಟ ಬಿಟ್ಟು ಬೇರೆ ಅವಕಾಶವಿರುವುದಿಲ್ಲ ಎಂದರು.
ಆದ್ದರಿಂದ ನಮ್ಮ ಆಗ್ರಹವೇನೆಂದರೆ ಈಗಿರುವ ಸಮಸ್ಯೆಗೆ ಸರಕಾರ ಅತೀ ಶೀಘ್ರವಾಗಿ ಕಾನೂನು ರೂಪಿಸಿ, ನಮಗೆ ಕಾನೂನು ಬದ್ದವಾಗಿ ವ್ಯವಹಾರ ನಡೆಸಲು, ಲಾರಿ ಸಂಚಾರ ನಡೆಸಲು ಅವಕಾಶ ಮಾಡಿಕೊಡಬೇಕು. ಅಥವಾ ಕಾನೂನು ವ್ಯವಸ್ಥೆ ಮಾಡಲು ನಿಗದಿತ ಸಮಯ ತೆಗೆದುಕೊಳ್ಳುವವರಿಗೆ, ನಮಗೆ ಇದುವರೆಗೆ ಯಾವ ರೀತಿಯ ರಿಯಾಯಿತಿಯಲ್ಲಿ ಲಾರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತೋ, ಅದೇ ರೀತಿಯಲ್ಲಿ ಸಂಚಾರಕ್ಕೆ ಅನುಮತಿಯನ್ನು ನೀಡಬೇಕೆಂದು ಮನವಿಯನ್ನು ಸರಕಾರಕ್ಕೆ ಜಿಲ್ಲಾಡಳಿತ ಮೂಲಕ ನೀಡಿದ್ದು, ಅವರು ಯಾವುದೇ ರೀತಿಯ ಸ್ಪಂದನೆ ನೀಡದ ಕಾರಣ ಪ್ರತಿಭಟನೆಯೊಂದಿಗೆ ಮುಷ್ಕರ ಮಾಡುವುದು ಅನಿವಾರ್ಯವಾಗಿದೆ ಎಂದರು
ಸುದ್ದಿಗೋಷ್ಟಿಯಲ್ಲಿ ಉದ್ಯಮಿ ಡಿ.ಆರ್ ರಾಜು,ಉದಯ ಹೆಗ್ಡೆ ಎರ್ಲಪಾಡಿ, ನವೀನ್ ದೇವಾಡಿಗ, ಹೆರ್ಮುಂಡೆ ಉದಯ್ ನಾಯಕ್,ಪ್ರಶಾಂತ್ ಶೆಟ್ಟಿ,ಉದಯಕುಮಾರ್ ಶೆಟ್ಟಿ, ಶ್ರೀನಿವಾಸ್ ನಿಟ್ಟೆ, ವಾಸುದೇವ್ ಭಟ್,ದಿಲೀಪ್ ಶೆಟ್ಟಿ,ಪ್ರಕಾಶ ಹೆಗಡೆ,ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.