ಕಡಬ : ಉದ್ಯಮಿಯೊಬ್ಬರು ಸೊಂಟಕ್ಕೆ ಬಲೂನು ಕಟ್ಟಿಕೊಂಡು ಸೇತುವೆ ಮೇಲಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದು ನಸುಕಿನ ಹೊತ್ತು ಕಡಬ ತಾಲೂಕಿನ ಶರವೂರು ಸಮೀಪ ಶಾಂತಿಮೊಗರು ಎಂಬಲ್ಲಿ ಸಂಭವಿಸಿದೆ.
ಶಾಂತಿಮೊಗರು ಅಲಂಗಾರಿನಲ್ಲಿ ದುರ್ಗಾಂಬ ಹಾರ್ಡ್‌ವೇರ್ ಎಂಬ ಅಂಗಡಿ ಹೊಂದಿರುವ ಸಾಮಾಜಿಕ, ಧಾರ್ಮಿಕ ಮುಂದಾಳು ಚಂದ್ರಶೇಖರ ಪೂಜಾರಿ (70) ಆತ್ಮಹತ್ಯೆ ಮಾಡಿಕೊಂಡವರು. ಬೆಳಗ್ಗೆ 4 ಗಂಟೆ ವೇಳೆಗೆ ಕಾರನ್ನು ಸೇತುವೆ ಮೇಲೆ ನಿಲ್ಲಿಸಿ ಸೊಂಟಕ್ಕೆ ಹಗ್ಗದಿಂದ ಬಲೂನು ಕಟ್ಟಿಕೊಂಡು ನದಿಗೆ ಜಿಗಿದಿದ್ದಾರೆ. ಶವ ಹುಡುಕಲು ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಸೊಂಟಕ್ಕೆ ಬಲೂನು ಕಟ್ಟಿಕೊಂಡಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಸದ್ಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.