ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿವಿಧ ಹೋರಾಟಗಾರರ ಮೇಲೆ ಹಾಕಿರುವ ಎಫ್ಐಆರ್ಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಸಾಹಿತಿ ಬರಹಗಾರರು ಹಾಗೂ ನಾನಾ ಜನಪರ ಸಂಘಟನೆಗಳ ಮುಖ್ಯಸ್ಥರ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡಪರ ಹೋರಾಟಗಾರರು, ರೈತರು, ಕಾರ್ಮಿಕರು, ದಲಿತ ಚಳವಳಿಗಳ ಹೋರಾಟಗಾರರು ಮತ್ತು ಸಾಹಿತಿ, ಬರಹಗಾರರ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದರು.
ಅನೈತಿಕ ಪೊಲೀಸ್ ಗಿರಿ, ದ್ವೇಷದ ರಾಜಕಾರಣ, ತೇಜೋವಧೆ ಮಾಡುವ ಟ್ರೋಲ್ಗಳು ಮತ್ತು ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ. ದೇಶವನ್ನು ಅಪಾಯದ ಸುಳಿಗೆ ದೂಡುತ್ತಾ , ಈ ಮಣ್ಣಿನ ಬಹುತ್ವವನ್ನು ನಾಶ ಮಾಡುತ್ತಿರುವ ಬಿಜೆಪಿ ಪರಿವಾರದ ವಿರುದ್ಧ ಖಚಿತ ನಿಲುವು ತೆಗೆದುಕೊಂಡು ಸ್ವಯಂಪ್ರೇರಿತವಾಗಿ ಈ ಚುನಾವಣೆಯಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಕ್ಕಾಗಿ ಸಾಹಿತಿ-ಬರಹಗಾರರಿಗೆ ಅಭಿನಂದನೆ ಸಲ್ಲಿಸಿ ಕನ್ನಡಪರ ಸಂಘಟನೆಗಳ ಮೇಲಿನ ಸುಳ್ಳು ಕೇಸ್ ವಾಪಸ್ ಪಡೆಯುವುದಾಗಿ ಭರವಸೆ ನೀಡಿದರು.