ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಗ್ರಾಮೀಣ ಆಟವಾಗಿರುವ ಕೋಳಿ ಅಂಕ ಇನ್ನುಮುಂದೆ ಅಕ್ರಮವಲ್ಲ ಬದಲಾಗಿ ಕಾನೂನು ಚೌಕಟ್ಟಿನೊಳಗೆ ಅದನ್ನು ನಡೆಸಲು ಅನುಮತಿ ನೀಡಲಾಗಿದೆ.
ಈ ಹಿಂದೆ ಸಾಂಪ್ರದಾಯಿಕ ಕೋಳಿ ಅಂಕ ನಡೆಸಲು ಅನುಮತಿ ನೀಡಬೇಕೆಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದರು. ಶಾಸಕರ ಆಗ್ರಹದ ಹಿನ್ನೆಲೆಯಲ್ಲಿ ಕೊನೆಗೂ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕೋಳಿ ಅಂಕ ನಡೆಸಲು ಅನುಮತಿ ದೊರೆತಿದೆ. ಆದರೆ ಕೆಲವೊಂದು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಮಂಗಳೂರಿನಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆದಿದ್ದು, ಇದರಲ್ಲಿ ಭಾಗವಹಿಸಿದ್ದ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈವ – ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ಸಲುವಾಗಿ ಕೋಳಿ ಅಂಕ ನಡೆಯುತ್ತದೆ. ಕೋಳಿ ಅಂಕಗಳಿಗೆ ಪೊಲೀಸರು ದಾಳಿ ಮಾಡುವ ಪ್ರಕರಣಗಳು ನಡೆಯುತ್ತಿದ್ದು, ನಿಯಮಾನುಸಾರ ನಡೆಯುವ ಕೋಳಿ ಅಂಕಗಳೂ ನಿಂತಹೋಗಿವೆ. ಹೀಗಾಗಿ ಜಿಲ್ಲೆಯಲ್ಲಿ ದೈವಸ್ಥಾನ ದೇವಸ್ಥಾನಗಳಲ್ಲಿ ನೇಮ, ಕೋಲ ಉತ್ಸವಗಳ ನಂತರ ನಡೆಯುವ ಕೋಳಿ ಅಂಕಕ್ಕೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ಶಾಸಕರ ಆಗ್ರಹಕ್ಕೆ ದ.ಕ ಪೋಲೀಸ್ ವರಿಷ್ಠಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿ ಕೋಳಿ ಅಂಕಕ್ಕೆ ಅನುಮತಿ ಕೇಳಿ ಯಾರೂ ನಮ್ಮ ಬಳಿ ಬರಬೇಡಿ. ಇದಕ್ಕೆ ಅನುಮತಿ ಸಿಗುವುದಿಲ್ಲ, ಕಾನೂನಿನಲ್ಲಿ ಅವಕಾಶ ಇಲ್ಲ ಎಂದರು. ಅಲ್ಲದೆ ದೈವ ದೇವರ ಹೆಸರು ಹೇಳಿ ಕೆಲವೆಡೆ ಜೂಜಾಟದ ಕೋಳಿ ಅಂಕ ನಡೆಯುತ್ತಿದೆ ಎಂದರು. ಕೆಲ ಹೊತ್ತು ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸದ್ಯ ಶಾಸಕರ ಮನವಿಯನ್ನು ಪುರಸ್ಕರಿಸಲು ಒಪ್ಪಿದ್ದು, ಕರಾವಳಿಯಲ್ಲಿ ಕೋಳಿ ಅಂಕಕ್ಕೆ ಷರತ್ತಬದ್ಧ ಅನುಮತಿ ನೀಡಿದ್ದಾರೆ. ಕಾನೂನಿನಲ್ಲಿ ಕೋಳಿ ಅಂಕಕ್ಕೆ ಅನುಮತಿ ಇಲ್ಲದಿದ್ದರೂ ಪೋಲೀಸ್ ಇಲಾಖೆಯಿಂದ ಅನುಮತಿ ನೀಡುತ್ತೇವೆ. ಇದಕ್ಕೆ ಯಾವುದೇ ಅಡ್ಡಿ ಆತಂಕ ಬರದಂತೆ ನೋಡಿಕೊಳ್ಳುತ್ತೇವೆ. ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಯಾವುದೇ ತಡೆ ನೀಡುವುದಿಲ್ಲ. ಆದರೆ ಯಾರೂ ಜೂಜಿಗಾಗಿ ಕೋಳಿ ಅಂಕ ನಡೆಸಬಾರದು ಎಂದು ಸೂಚಿಸಲಾಗಿದೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ