ಬೆಂಗಳೂರು: ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರ ಭತ್ಯೆಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಧಾರ್ಮಿಕ ದತ್ತಿ ಇಲಾಖೆ ದೇಗುಲಗಳ ಅರ್ಚಕ ಭತ್ಯೆಯ ಒಟ್ಟು 77.85 ಕೋಟಿ ರೂ. ಬಿಡುಗಡೆಗೊಳಿಸಿದೆ.
ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿನ ಸಿ ದರ್ಜೆ ದೇವಸ್ಥಾನಗಳ ಅರ್ಚಕರು ತಸ್ತಿಕ್ ಹಣವನ್ನು ತಹಶೀಲ್ದಾರ್ ಮೂಲಕ ಪಡೆಯುತ್ತಿದ್ದಾರೆ. ಗುಮಾಸ್ತು, ಶಿರಸ್ತೇದಾರರು, ಟ್ರಿಜರಿ ಅಧಿಕಾರಿಗಳು ಕಮೀಷನ್ ಬೇಡಿಕೆ ಇಡುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗಳಿಗೆಗೆ ಹಣ ಜಮೆ ಮಾಡುವುದಾಗಿ ಹೇಳಿದ್ದರು. ಇದೀಗ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಇದನ್ನು ನೇರವಾಗಿ ಅರ್ಚಕರ ಖಾತೆಗೆ ಜಮೆ ಮಾಡುತ್ತಾ ಅಥವಾ ತಹಶೀಲ್ದಾರ್ ಕಚೇರಿಗೆ ಕಳುಹಿಸುತ್ತಾ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯಗಳ ಕೆಲಸಕ್ಕೆಂದು ಸರ್ಕಾರ ಬಿಡುಗಡೆ ಮಾಡುವ ತಸ್ತಿಕ್ ಹಣಕ್ಕೂ ಖಜಾನೆ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರ ಸಂಘ ಇತ್ತೀಚೆಗೆ ಆರೋಪಿಸಿತ್ತು. ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಇಲಾಖೆಯ ಸಿ ದರ್ಜೆ ದೇವಸ್ಥಾನಗಳ ಅರ್ಚಕರ ಸಂಘ ಪತ್ರ ಬರೆದಿತ್ತು. ಅರ್ಚಕರ ಮನವಿಗೆ ಸ್ಪಂದಿಸಿದ್ದ ಸಚಿವ ರಾಮಲಿಂಗರೆಡ್ಡಿ. ಇನ್ಮುಂದೆ ಅರ್ಚಕರ ಖಾತೆಗೆ ನೇರವಾಗಿ ತಸ್ತಿಕ್ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು