ಬೆಂಗಳೂರು: ಶಾಸನಸಭೆಗಳು ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತರ ಕೇಂದ್ರಗಳಾಗುತ್ತಿವೆ. ಬಹುತೇಕ ರಾಜಕೀಯ ಪಕ್ಷಗಳು ಕೋಟ್ಯಧೀಶರಿಗೆ ಮಣೆ ಹಾಕುತ್ತಿವೆ. ತಮ್ಮ ಬಳಿ ಕೋಟಿಗಟ್ಟಲೇ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಯಿದೆ ಎಂದಯ ಘೋಷಿಸಿಕೊಂಡ ಶಾಸಕರ ಸಂಖ್ಯೆ ಏರುತ್ತಲೇ ಇದೆ. ಅದರಂತೆ ಕರ್ನಾಟಕದಲ್ಲಿ ಶೇ 95ರಷ್ಟು ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಶೇ. 35ರಷ್ಟು ಶಾಸಕರು ಕ್ರಿಮಿನಲ್ ಆರೋಪಗಳನ್ನು ಹೊಂದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕೆ ರಿಫಾರ್ಮ್ಸ್ (ಎಡಿಆರ್) ವರದಿಯಿಂದ ತಿಳಿದುಬಂದಿದೆ.
ಈ ಬಗ್ಗೆ ಗುರುವಾರ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕೆ ರಿಫಾರ್ಮ್ ಎನ್ನುವ ಸಂಸ್ಥೆಯಿಂದ ಬಿಡುಗಡೆಯಾಗಿರುವ ವರದಿಯಂತೆ ಸುಮಾರು ಶೇ.26 ರಷ್ಟು ಶಾಸಕರು ತಮ್ಮ ಅಫಿಡವಿಟ್ ಗಳಲ್ಲಿ ತಮ್ಮ ವಿರುದ್ಧ ಇರುವ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಹೇಳಿದೆ.
ಕ್ರಿಮಿನಲ್ ಕೇಸ್ ದಾಖಲಾಗಿರುವ ಶಾಸಕರಲ್ಲಿ ಶೇ.30ರಷ್ಟು ಬಿಜೆಪಿ ಎಂಎಲ್ಎಗಳಾಗಿದ್ದಾರೆ. ಬಿಜೆಪಿಯ 118 ಶಾಸಕರಲ್ಲಿ 112 ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ. ಪ್ರತಿ ಶಾಸಕರ ಸರಾಸರಿ ಆಸ್ತಿ ಮೌಲ್ಯ 29.85 ಕೋಟಿಯಾಗಿದೆ. ಜೆಡಿಎಸ್ ಶಾಸಕರ ಸರಾಸರಿ ಆಸ್ತಿ 4.34 ಕೋಟಿ ರೂ, ನಾಲ್ವರು ಪಕ್ಷೇತರ ಶಾಸಕರ ಆಸ್ತಿ 40.92 ಕೋಟಿಯಾಗಿದೆ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ.
ಬಿಜೆಪಿ 49, ಕಾಂಗ್ರೆಸ್ ಪಕ್ಷದ 16, ಜೆಡಿಎಸ್ 9, ಸ್ವತಂತ್ರ ಶಾಸಕರಲ್ಲಿ ಇಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಕನಕಪುರ ಕ್ಷೇತ್ರದಿಂದ ಗೆದ್ದು ಶಾಸಕರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಒಟ್ಟು ಆಸ್ತಿ ಮೌಲ್ಯ 840 ಕೋಟಿಗೂ ಅಧಿಕ ಮೌಲ್ಯದ್ದಾಗಿದೆ. ಸುರೇಶ್ ಬಿಎಸ್ ಆಸ್ತಿ 416 ಕೋಟಿ ಹಾಗೂ ಎಂ.ಕೃಷ್ಣಪ್ಪ 236 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.