ನವದೆಹಲಿ (ಜೂ.26): ದೇಶದ 16 ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ವಿಶೇಷ ನೆರವು ನೀಡಿರುವ ಕೇಂದ್ರ ಬಿಜೆಪಿ ಸರ್ಕಾರ, ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಬರೋಬ್ಬರಿ 3,647 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.
ಕೇಂದ್ರದ 2023-24 ಹಣಕಾಸು ವರ್ಷದ ವಿಶೇಷ ಯೋಜನೆ ಅಡಿಯಲ್ಲಿ ಬಂಡವಾಳ ಹೂಡಿಕೆಗಾಗಿ 16 ರಾಜ್ಯಗಳಿಗೆ 56,415 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ಬಂಡವಾಳ ಹೂಡಿಕೆಗೆ ಹಣಕಾಸು ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯಡಿ ಕರ್ನಾಟಕಕ್ಕೆ 3647 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್, ರಸ್ತೆಗಳು, ಸೇತುವೆಗಳು ಮತ್ತು ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ವಲಯಗಳಲ್ಲಿನ ಯೋಜನೆಗಳ ವೇಗವನ್ನು ಹೆಚ್ಚಿಸಲು ಹಾಗೂ ಜಲ ಜೀವನ್ ಮಿಷನ್ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ರಾಜ್ಯ ಪಾಲನ್ನು ಪೂರೈಸಲು ಈ ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹಣವನ್ನು ಒದಗಿಸಲಾಗಿದೆ. 2023-24 ರ ಕೇಂದ್ರ ಬಜೆಟ್‌ನಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು 2023-24 ಯೋಜನೆಯನ್ನು ಘೋಷಿಸಲಾಗಿತ್ತು. ಇದೀಗ ಬಜೆಟ್ ನಲ್ಲಿ ಘೋಷಣೆ ಮಾಡಿದ ಯೋಜನೆಯಂತೆ ಹಣ ಬಿಡುಗಡೆ ಮಾಡಲಾಗಿದೆ.