ನವದೆಹಲಿ: ದೇಶದಲ್ಲಿ ಜವಳಿ ಉದ್ಯಮಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿವಿಧೆಡೆ 7 ಬೃಹತ್ ಜವಳಿ ಪಾರ್ಕ್ಗಳನ್ನು ಸ್ಥಾಪಿಸುತ್ತಿದೆ. ಇದರ ಒಂದು ಪಾರ್ಕ್ ಕರ್ನಾಟಕಕ್ಕೆ ಸಿಕ್ಕಿದೆ. ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಸ್ಥಾಪನೆ ಆಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಕರ್ನಾಟಕ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಈ 7 ಮಹಾ ಜವಳಿ ಕೇಂದ್ರಗಳು ತಲೆ ಎತ್ತಲಿದ್ದು, 5ಎಫ್ (ಫಾರ್ಮ್, ಫೈಬರ್, ಫ್ಯಾಕ್ಟರಿ, ಫ್ಯಾಷನ್, ಫಾರೀನ್) ದೃಷ್ಟಿಕೋನದಲ್ಲಿ ಈ ಪಾರ್ಕ್ಗಳಿಂದ ಜವಳಿ ಉದ್ಯಮಕ್ಕೆ ಪುಷ್ಟಿ ಸಿಗಲಿದೆ. ಕರ್ನಾಟಕದಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಸ್ಥಾಪನೆಯ ಅವಕಾಶ ಸಿಕ್ಕಿದೆ
ಪಿಎಂ ಮಿತ್ರಾ ಮೆಗಾ ಟೆಕ್ಸ್ಟೈಲ್ ಪಾರ್ಕ್ಗಳು ಜವಳಿ ವಲಯಕ್ಕೆ ಬೇಕಾದ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತವೆ. ಕೋಟಿಗಟ್ಟಲೆ ಬಂಡವಾಳ ಹರಿದುಬರುವಂತೆ ಮಾಡುತ್ತದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಗುರಿ ಸಾಧನೆಗೆ ಇದು ಒಳ್ಳೆಯ ನಿದರ್ಶನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.