ಎರ್ನಾಕುಲಂ: ಮೂವರನ್ನು ಬಲಿಪಡೆದ ಭಾನುವಾರದ ಕಲಮಶ್ಶೇರಿ ಬಾಂಬ್ ಸ್ಫೋಟದ ಹಿಂದೆ ದೊಡ್ಡ ಸಂಚೇ ರೂಪಿಸಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿ ಬಯಲಾಗಿದೆ. ಸಾವಿರಾರು ಜನರು ಸೇರಿದ್ದ ದೊಡ್ಡ ಸಮುದಾಯ ಭವನವನ್ನೇ ಸ್ಫೋಟಿಸುವ ಬೃಹತ್ ಯೋಜನೆಯನ್ನು ದಾಳಿಕೋರ ಡೊಮಿನಿಕ್ ಮಾರ್ಟಿನ್ ಹಾಕಿಕೊಂಡಿದ್ದ ಎಂಬ ವಿಷಯ ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಬಾಂಬ್ ಜೋಡಣೆಯಲ್ಲಿ ಮಾರ್ಟಿನ್ ಯಶಸ್ವಿಯಾಗಿದ್ದರೂ, ಅದು ಇನ್ನಷ್ಟು ತೀವ್ರತೆ ಪಡೆದುಕೊಳ್ಳುವಂತೆ ಮಾಡಲು ವಿಫಲವಾದ ಕಾರಣ ಸಾವಿರಾರು ಜನರ ಪ್ರಾಣ ಉಳಿದಿದೆ. ಭಾನುವಾರದ ಕಾರ್ಯಕ್ರಮ ನಡೆದ ಸ್ಥಳದಲ್ಲಿ 2500ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಭಾನುವಾರ ಬೆಳಗ್ಗೆ ಕ್ರೈಸ್ತ ಧರ್ಮಸಭೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ 4 ಐಇಡಿಗಳನ್ನು (Iಇಆ) ಬಳಸಲಾಗಿತ್ತು. ಈ ದುಷ್ಕೃತ್ಯಕ್ಕಾಗಿ ಮಾರ್ಟಿನ್ ಆನ್ಲೈನ್ನಲ್ಲಿ ಬಾಂಬ್ ತಯಾರಿಕೆಯನ್ನು ಕಲಿತಿದ್ದ.
ಸ್ಫೋಟಕಗಳಲ್ಲಿ ಪಟಾಕಿಯಲ್ಲಿ ಬಳಸಲಾಗುವ ರಾಸಾಯನಿಕ ಬಳಸಿ, ಬೆಂಕಿ ಬೇಗ ಎಲ್ಲೆಡೆ ವ್ಯಾಪಿಸಲು ಪೆಟ್ರೋಲ್ ಅನ್ನು ಕೂಡ ಬಳಸಿದ್ದ. ಐಇಡಿಯನ್ನು ಸೆಣಬಿನಿಂದ ಸುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.ಐಇಡಿಗಳನ್ನು ಪ್ಯಾಕ್ ಮಾಡಲು ಸೆಣಬಿನ ಚೀಲಗಳನ್ನು ಬಳಸಲಾಗಿತ್ತು. ರೇಡಿಯೋ ಫ್ರೀಕ್ವೆನ್ಸಿ ಸಾಧನಗಳನ್ನು, ಸ್ಫೋಟವನ್ನು ಪ್ರಚೋದಿಸಲು ಉಪಯೋಗಿಸಲಾಗಿತ್ತು. ಇದರಿಂದಾಗಿ ಇಡೀ ಸಭಾಂಗಣಕ್ಕೆ ಬೆಂಕಿ ಹಾಕುವ ಉದ್ದೇಶವನ್ನು ಆತ ಹೊಂದಿದ್ದ ಎಂದು ತಿಳಿದು ಬರುತ್ತದೆ. ಮೊಬೈಲ್ ಮೂಲಕವೇ ರಿಮೋಟ್ ಬಳಸಿ ಬಾಂಬ್ ಸ್ಫೋಟಿಸಿದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಫೋಟದ ಹೊಣೆ ಹೊತ್ತಿರುವ ಪ್ರಕರಣದ ಪ್ರಮುಖ ಶಂಕಿತ ಡೊಮಿನಿಕ್ ಮಾರ್ಟಿನ್ ತನ್ನ ಮನೆಯಲ್ಲಿ ಐಇಡಿಗಳನ್ನು ಜೋಡಿಸಿ ಮತ್ತು ಬಾಂಬ್ ತಯಾರಿಕೆ ಕಲಿಯಲು ಇಂಟರ್ನೆಟ್ ಬಳಸಿದ್ದಾನೆ ಎಂದು ಗೊತ್ತಾಗಿದೆ. ಆತ ಗಲ್ಫ್ನಲ್ಲಿ ತಾಂತ್ರಿಕ ಕೆಲಸ ಮಾಡುತ್ತಿದ್ದ. ಆತನಿಗೆ ಯಂತ್ರಗಳ ಬಗ್ಗೆ ಮೂಲಭೂತ ಜ್ಞಾನವಿತ್ತು. ಉಳಿದಿದ್ದನ್ನು ಆನ್ಲೈನ್ನಲ್ಲಿ ಕಲಿತುಕೊಂಡ ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.