Share this news

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಜಾತಿ ಸಮೀಕ್ಷೆ ಅಸ್ತ್ರಕ್ಕೆ ತಿರುಗೇಟು ನೀಡಲು ಬಿಜೆಪಿ ಚಿಂತನೆ ನಡೆಸಿದ್ದು, ಒಬಿಸಿ ಅಸ್ತ್ರವನ್ನು ಬಳಸುವ ಕುರಿತು ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಬಿಜೆಪಿಯು ಈ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳ ಇತರ ಹಿಂದುಳಿದ ವರ್ಗಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಿದೆ. ಗುರುವಾರ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳ ಸುಮಾರು 40ಕ್ಕೂ ಹೆಚ್ಚು ಹಿಂದುಳಿದ ವರ್ಗಗಳ ಮುಖಂಡರು ಪಾಲ್ಗೊಂಡಿದ್ದರು. ವಿವಿಧ ರಾಜ್ಯಗಳಲ್ಲಿನ ಜಾತಿ ಸಮೀಕರಣ, ಒಬಿಸಿ ಸಮುದಾಯಗಳ ಪ್ರಾತಿನಿಧ್ಯ ಮತ್ತು ಮುಂದೇನು ಮಾಡಬಹುದು ಎಂಬುದರ ಕುರಿತು ಸಮಾಲೋಚನೆ ನಡೆಸಿದರು.

ಕರ್ನಾಟಕದಿಂದ ಬಿಜೆಪಿಯ ಒಬಿಸಿ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿ.ಸಿ.ಮೋಹನ್‌ ಅವರು ವಿಶೇಷ ಆಹ್ವಾನದ ಮೇರೆಗೆ ಈ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ ನಾಯಕರು ಕಾಂಗ್ರೆಸ್‌ನ ಜಾತಿ ಸಮೀಕ್ಷೆ ಅಸ್ತ್ರಕ್ಕೆ ಹೂಡಬೇಕಾದ ಪ್ರತ್ಯಾಸ್ತ್ರದ ಬಗ್ಗೆ ಚಿಂತನ ಮಂಥನ ನಡೆಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರದಿಂದಲೇ ಒಬಿಸಿ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲೂ ನಿರ್ಧರಿಸಿದ್ದಾರೆ. ಸಂವಿಧಾನ ತಜ್ಞರ ಬಳಿ ಚರ್ಚಿಸಿ ಪಕ್ಷದ ನಿಲುವನ್ನು ಪ್ರಕಟಿಸಬೇಕು ಎಂಬ ತೀರ್ಮಾನವನ್ನೂ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.ಇದೇ ವೇಳೆ ಒಬಿಸಿ ಸಮುದಾಯಕ್ಕೆ ಬಿಜೆಪಿ ನೀಡಿರುವ ಯೋಜನೆಗಳು, ಕೊಡುಗೆಗಳ ಬಗ್ಗೆ ವಿವಿಧ ರಾಜ್ಯಗಳ ಒಬಿಸಿ ನಾಯಕರು ಮುಂದಾಳತ್ವ ಮತ್ತು ಮುತುವರ್ಜಿ ವಹಿಸಿ ಮತದಾರರಿಗೆ ತಲುಪಿಸಬೇಕು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಒಬಿಸಿ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಜನರಿಗೆ ಮನದಟ್ಟು ಮಾಡಬೇಕು ಎಂಬ ಸೂಚನೆಯನ್ನು ಸಭೆಯಲ್ಲಿ ಭಾಗವಹಿಸಿದ್ದ ನಾಯಕರಿಗೆ ವರಿಷ್ಠರು ನೀಡಿದರು ಎನ್ನಲಾಗಿದೆ. ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಕರ್ನಾಟಕದಲ್ಲಿನ ಜಾತಿ ಜನಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ. ಈ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ತಲೆದೋರಿದೆ. ವರದಿ ಸಲ್ಲಿಕೆ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಲಿದೆ ಎಂಬ ಮಾಹಿತಿ ನೀಡಿದರು.
ಒಟ್ಟಿನಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜಾತಿ ಗಣತಿ ಮುಗಿಸಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ಗೆ ಇತ್ತ ಬಿಜೆಪಿ ಹಿಂದುಳಿದ ವರ್ಗದ ಪ್ರತ್ಯಾಸ್ತ್ರದ ಮೂಲಕ ಟಕ್ಕರ್ ನೀಡಲು ಸಿದ್ದತೆ ನಡೆಸುತ್ತಿದೆ


 

 

 

 

 

 

 

 

Leave a Reply

Your email address will not be published. Required fields are marked *