ಬೆಂಗಳೂರು : ಕೇಂದ್ರ ಚುನಾವಣಾ ಆಯೋಗದಿಂದ ಕರ್ನಾಟಕ ವಿಧಾನಸಭೆ ಚುಣಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾಗಿದ್ದು, 224 ವಿಧಾಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಈ ನಡುವೆ ಬೆಂಗಳೂರಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವ ನಿವಾಸದ ಬಳಿ ಫ್ಲೆಕ್ಸ್ ಭರಾಟೆ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಅವರ ನಿವಾಸದ ಮುಂದೆ ಪೋಸ್ಟರ್ ಅಂಟಿಸಿದ್ದಾರೆ.

ಇನ್ನು ಸಿದ್ದರಾಮಯ್ಯರ ಬೆಂಗಳೂರಿನ ಸರ್ಕಾರಿ ನಿವಾಸದ ಬಳಿ ಫ್ಲೆಕ್ಸ್ ಭರಾಟೆ ಶುರುವಾಗಿದ್ದು, ಮುಂದಿನ ಸಿಎಂ ಸಿದ್ದರಾಮಯ್ಯಗೆ ಶುಭಾಶಯಗಳು, 2 ನೇ ಬಾರಿಗೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಶುಭಾಶಯಗಳು ಎಂಬ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.

ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ಸಿಎಂ ಹುದ್ದೆ ಆಯ್ಕೆ ಬಗ್ಗೆ ಚರ್ಚೆ ನಡೆಲಿದೆ. ಹೀಗಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಕಾಂಗ್ರೆಸ್ ಶಾಸಕರು ಹೊರಟಿದ್ದಾರೆ. ಲಕ್ಷ್ಮಣ್ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್, ರಾಜ ಕಾಗೆ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

