ಕಾರ್ಕಳ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದ್ದು, ಕೊನೆಗೂ ಬಿಜೆಪಿ ಗೆಲ್ಲುವ ಮೂಲಕ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲು ವಿರುದ್ಧ ಕೇವಲ 4404 ಮತಗಳ ಅಂತರದಿಂದ ಗೆಲುವು ಸಾಧಿಸಿ ಸತತ ಮೂರನೇ ಬಾರಿ ಶಾಸಕರಾಗಿ ಅಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಪ್ರಮುಖವಾಗಿ ಬಿಜೆಪಿಯ ಸುನಿಲ್ ಕುಮಾರ್ ವಿರುದ್ಧ ಸ್ಪರ್ಧಿಸಿದ್ದ ಪ್ರಖರ ಹಿಂದೂವಾದಿ ಪ್ರಮೋದ್ ಮುತಾಲಿಕ್ ಅವರು ಕೇವಲ 4432 ಮತಗಳನ್ನು ಪಡೆದು ಸೋತರೂ,ಈ ಬಾರಿಯ ಚುನಾವಣೆಯಲ್ಲಿ ರೆಬಲ್ ಆಗಿ ಹೊರಹೊಮ್ಮಿದ್ದಾರೆ.ಸುನಿಲ್ ಕುಮಾರ್ ವಿರುದ್ಧ ಭ್ರಷ್ಟಾಚಾರ ಹಾಗೂ ಕಾರ್ಯಕರ್ತರ ಕಡೆಗಣನೆ ಆರೋಪ ಹೊರಿಸಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರೂ ಸುನಿಲ್ ಗೆಲುವಿನ ಓಟಕ್ಕೆ ಅಡ್ಡಿಯಾಗಲಿಲ್ಲ.
ಕಾರ್ಕಳದಲ್ಲಿ ಒಟ್ಟು 154906 ಮತಗಳು ಚಲಾವಣೆಯಾಗಿದ್ದು ಈ ಪೈಕಿ ಸುನಿಲ್ ಕುಮಾರ್ 76019 ಮತಗಳನ್ನು ಪಡೆದರೆ,ಉದಯ ಶೆಟ್ಟಿ ಮುನಿಯಾಲು 71615 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸುನಿಲ್ ಕುಮಾರ್ 4404 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಉಳಿದಂತೆ ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ಕುಚ್ಚೂರು 279, ಆಮ್ ಆದ್ಮಿ ಪಕ್ಷದ ಡೇನಿಯಲ್ ರೇಂಜರ್ 537, ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಡಿಸೋಜ 498,ಪಕ್ಷೇತರರಾದ ಡಾ.ಮಮತಾ ಹೆಗ್ಡೆ 237,ವಿದ್ಯಾಲಕ್ಷ್ಮೀ 150,ಸುಧಾಕರ ಆಚಾರ್ಯ 224 ಮತಗಳನ್ನು ಪಡೆದರೆ 915 ಮತಗಳಲ್ಲಿ ನೋಟಾ ಗೆ ಚಲಾವಣೆಯಾಗಿದೆ.
ಒಟ್ಟಿನಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದರೂ ರಾಜ್ಯದಲ್ಲಿನ ಸಾಧನೆ ತೀರಾ ಕಳಪೆಯಾಗಿದೆ.