ಬೆಂಗಳೂರು : ಎಸ್ ಡಿಪಿಐ ಕಾಂಗ್ರೆಸ್ ನ ಅಘೋಷಿತ ಮುಖವಾಣಿಯಾಗಿದ್ದು, ಈ ಎರಡು ಪಕ್ಷಗಳ ನಡುವಿನ ಚುನಾವಣಾ ಮೈತ್ರಿ ಏನೆಂಬುದನ್ನು ಬಹಿರಂಗಗೊಳಿಸಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಈ ಎರಡು ಪಕ್ಷಗಳ ನಡುವೆ ಕೊಡುಕೊಳ್ಳುವಿಕೆ ನಡೆಯುತ್ತಿದೆ. ಪಿಎಫ್ ಐ ಉಗ್ರರ ಮೇಲಿರುವ ಪ್ರಕರಣಗಳನ್ನು ಕೈ ಬಿಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾಗಿದ್ದರು. 2018ರಿಂದ ಎಸ್ ಡಿ ಪಿ ಐ & ಪಿ ಎಫ್ ಐ ಜೊತೆಗೆ ಕಾಂಗ್ರೆಸ್ ನಡೆಸಿಕೊಂಡು ಬಂದ ಹೊಂದಾಣಿಕೆ ರಾಜಕಾರಣ ಇಂದಿಗೂ ಮುಂದುವರಿದಿದೆ ಎಂದು ಸುನಿಲ್ ಆರೋಪಿಸಿದ್ದಾರೆ
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಹಿಂದಿರುವುದು ಇದೇ ಎಸ್ ಡಿಪಿಐ ಉಗ್ರರು. ಆದರೆ ಕಾಂಗ್ರೆಸ್ ಈ ಹತ್ಯೆ ಹಿಂದಿರುವ ಶಕ್ತಿಗಳ ಬಗ್ಗೆ ಮಾತನಾಡಲಿಲ್ಲ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲೂ ಇದೇ ಸಂಘಟನೆಯ ಹಸ್ತಕ್ಷೇಪ ಇತ್ತು. ಆದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆ ಘಟನೆಯನ್ನೇ ವ್ಯಂಗ್ಯವಾಡಿದರು. ಇದರಿಂದ ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಮಧ್ಯೆ ಇರುವ ಮಧುರ ಸಂಬಂಧ ಅರ್ಥವಾಗುತ್ತದೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರ ಪಿಎಫ್ ಐ ನ್ನು ನಿಷೇಧಿಸುವ ಮೂಲಕ ದೇಶದ ಆಂತರಿಕ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದ್ದ ಶಕ್ತಿಗಳನ್ನು ನಿಯಂತ್ರಿಸಿದೆ. ಆದರೆ ಕಾಂಗ್ರೆಸ್ ಈ ವಿಚಾರದಲ್ಲೂ ರಾಜಕೀಯ ನಡೆಸಿತ್ತು ಎಂದು ಆರೋಪಿಸಿದರು.
ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಸುತ್ತೇವೆ ಎನ್ನುವ ಕಾಂಗ್ರೆಸ್ ಎಸ್ ಡಿಪಿಐ ವಿಚಾರದಲ್ಲಿ ಮಾತ್ರ ಮಾತನಾಡುವುದಿಲ್ಲ. ಅದೇ ರೀತಿ ಎಸ್ ಡಿಪಿಐ ಕೂಡಾ ಕಾಂಗ್ರೆಸ್ ವಿರುದ್ಧ ಧ್ವನಿ ಎತ್ತುವುದಿಲ್ಲ. ಇದು ಒಳ ಒಪ್ಪಂದವಲ್ಲದೇ ಮತ್ತೇನು ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್ ಈ ಅನಧಿಕೃತ ಮೈತ್ರಿ ಬಗ್ಗೆ ನಿಮ್ಮ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.