ಬೆಳಗಾವಿ : ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣವನ್ನು ತಿರಸ್ಕರಿಸಿ ಕಾಂಗ್ರೆಸ್ ಅಕ್ಷಮ್ಯ ಅಪರಾಧ ಮಾಡಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ
ರಾಮ ಮಂದಿರ ಉದ್ಘಾಟನೆಯ ಕುರಿತು ಕಾಂಗ್ರೆಸ್ ಪಕ್ಷ ಗೈರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಹೋಗುವುದು ರಾಮನಿಗೆ ನಮಸ್ಕಾರ ಮಾಡಲು ಹೊರತು ಆರೆಸ್ಸೆಸ್ ಅಥವಾ ಬಿಜೆಪಿಗೆ ನಮಸ್ಕಾರ ಮಾಡಲು ಅಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
500 ವರ್ಷಗಳ ಬಳಿಕ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಹೋಗದೇ ಇರುವುದು ನಿಮ್ಮ ದೌರ್ಭಾಗ್ಯ. ನಿಜವಾಗಿಯೂ ಹಿಂದೂಗಳ ಹಾಗೂ ರಾಮನ ಶಾಪ ನಿಮಗೆ ತಟ್ಟುತ್ತದೆ. ಭಾಗವಹಿಸಿದ್ದರೆ ನೀವು ಹಿಂದೂ ಸಮಾಜದ ಜೊತೆ ಒಂದಾಗುತಿದ್ದರೆ ನಿಮಗೂ ರಾಮನ ಕೃಪೆ ಸಿಗುತ್ತಿತ್ತು. ಪಾಪಿಷ್ಟರ ಜೊತೆ ರಾವಣನ ಮನಸ್ಥಿತಿಯವರು ನೀವು ತಿರಸ್ಕಾರ ಮಾಡಿದ್ದು ಅತ್ಯಂತ ಹೇಯ ಕೃತ್ಯ. ಅಕ್ಷಮ್ಯ ಅಪರಾಧ ಮಾಡಿ ಕಾಂಗ್ರೆಸ್ನವರು ತಪ್ಪು ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮ ಮಂದಿರ ನಿರ್ಮಾಣ ನಮ್ಮ ಹಿಂದೂಗಳ ಅಸ್ಮಿತೆಯಾಗಿದೆ, ಕಾಂಗ್ರೆಸ್ ಪಕ್ಷ ರಾಮ ಮಂದಿರ ವಿಚಾರದಲ್ಲಿ ಅಧರ್ಮ ದೇಶ ವಿರೋಧಿ ರಾಜಕೀಯ ಮಾಡುತ್ತಿದೆ.ಈ ವಿಚಾರದಲ್ಲಿ ಬಿಜೆಪಿ, ಆರ್ಎಸ್ಎಸ್ ರಾಜಕೀಯ ಮಾಡುತ್ತಿದೆ ಎನ್ನಲು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಇಲ್ಲ.ಶ್ರೀರಾಮ ಮಂದಿರ ಉದ್ಘಾಟನೆಯಲ್ಲಿ ಬಿಜೆಪಿ ಹಾಗೂ ಆರ್ಎಸ್ಎಸ್ ರಾಜಕೀಯ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಹಿಂದೂಗಳ ಪರವಾಗಿಲ್ಲ. ಮುಸ್ಲಿಮರ ತುಷ್ಟೀಕರಣ ಮಾಡುವುದರಲ್ಲೇ ಕಾಂಗ್ರೆಸ್ ಪಕ್ಷ ಬೆಳೆದು ಬಂದಿದೆ ಎಂದು ಆರೋಪಿಸಿದ್ದಾರೆ.
ನಾವು, ಆರೆಸ್ಸೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ರಾಮಮಂದಿರಕ್ಕಾಗಿ ಕಲ್ಲು ಹೊತ್ತಿದ್ದೇವೆ. ಲಾಠಿ ಏಟು ತಿಂದಿದ್ದೇವೆ, ಜೈಲಿಗೆ ಹೋಗಿ ಬಂದಿದ್ದೇವೆ.ಮೊಘಲ್ ದಾಳಿಕೋರ ಬಾಬರನ ಅನ್ಯಾಯದ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿದ್ದೇವೆ.ಬಾಬರನ ದಾಳಿಯಿಂದ ನಾವು ರಾಮ ಮಂದಿರ ಕಳೆದುಕೊಳ್ಳುವಂತಾಯಿತು, ಆದ್ದರಿಂದ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಮಾಡಲು ನಮಗೂ ಹಕ್ಕಿದೆ ಎಂದು ತಿರುಗೇಟು ನೀಡಿದ್ದಾರೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ